ಅಥಣಿ: ರಾಜ್ಯದ 25 ಬಿಜೆಪಿ ಸಂಸದರು ಬರೀ ಶೋಕೇಸ್ ಪೀಸ್ ಆಗಿದ್ದಾರೆ. ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕುವುದು, ಸಂಸತ್ನಲ್ಲಿ ಟೇಬಲ್ ಕುಟ್ಟುವುದು ಹಾಗೂ ಮೋದಿ ಮೋದಿ ಎಂದು ಹೇಳುವುದನ್ನು ಬಿಟ್ಟರೆ ಬೇರ್ಯಾವ ಕೆಲಸವನ್ನೂ ಮಾಡಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಷಯ ನಾನು ಹೇಳೋದಲ್ಲ. ಬಿಜೆಪಿ ಸಂಸದರೊಬ್ಬರೇ ನನ್ನಲಿ ಹೇಳಿದ ಮಾತಿದು. ನಾವು ಹಾಗೆಯೇ ಕೂಡಿದಾಗ ಇದನ್ನು ನನ್ನ ಮುಂದೆ ಪ್ರಸ್ತಾವಿಸಿದ್ದಾರೆ ಎಂದು ಸವದಿ ಹೇಳಿದ್ದಾರೆ.
ಯಾವೊಬ್ಬ ಸಂಸದನೂ ಮೋದಿ ಮುಂದೆ ತಲೆ ಎತ್ತಿ ಮಾತನಾಡದೆ ಕೋಲೆ ಬಸವನಂತೆ ಆಗಿದ್ದಾರೆ. ಸಂಸದರು ತಮ್ಮ ಕ್ಷೇತ್ರಕ್ಕೆ ಬೇಕಾಗುವ ಅನುದಾನ ತರದೇ ಒದ್ದಾಡುವ ಪರಿಸ್ಥಿತಿ ಬಿಜೆಪಿಯಲ್ಲಿ ಇದೆ ಎಂದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನನ್ನ ಮಗ ಚಿದಾನಂದ ಸವದಿಯಾಗಲಿ, ನಾನಾಗಲಿ ಸ್ಪರ್ಧಿಸುವುದಿಲ್ಲ. ನಾವಿಬ್ಬರೂ ಟಿಕೆಟ್ ಆಕಾಂಕ್ಷಿಗಳಲ್ಲ ಎಂದು ಕಾಂಗ್ರೆಸ್ ಮುಖಂಡರಿಗೆ ಸ್ಪಷ್ಟಪಡಿಸಿದ್ದೇನೆ ಎಂದ ಸವದಿ, ಕಾಂಗ್ರೆಸ್ ಟಿಕೆಟ್ ಪಡೆದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ. ರಾಜ್ಯ ಸರಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದರು.