Home ಟಾಪ್ ಸುದ್ದಿಗಳು ವೈಫಲ್ಯ ಮುಚ್ಚಿಹಾಕಲು ದೇಶದಲ್ಲಿ ಸರ್ಕಾರಿ ಪ್ರಾಯೋಜಿತ ಗುಂಪು ಹತ್ಯೆ, ಗಲಭೆ ಸೃಷ್ಟಿ: ಅಬ್ದುಲ್ ಮಜೀದ್ ಮೈಸೂರು

ವೈಫಲ್ಯ ಮುಚ್ಚಿಹಾಕಲು ದೇಶದಲ್ಲಿ ಸರ್ಕಾರಿ ಪ್ರಾಯೋಜಿತ ಗುಂಪು ಹತ್ಯೆ, ಗಲಭೆ ಸೃಷ್ಟಿ: ಅಬ್ದುಲ್ ಮಜೀದ್ ಮೈಸೂರು

ತಿರುವನಂತಪುರಂ : ಮೋದಿ ಸರ್ಕಾರದ ವೈಫಲ್ಯವನ್ನು ಮರೆಮಾಚಲು ದೇಶದಲ್ಲಿ ಗುಂಪು ಹತ್ಯೆಗಳು ಮತ್ತು ಗಲಭೆಗಳನ್ನು ನಡೆಸಲಾಗುತ್ತಿದೆ ಎಂದು ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ಆರೋಪಿಸಿದ್ದಾರೆ.


ತಿರುವನಂತಪುರಂ ಜಿಲ್ಲಾ ಸಮಿತಿಯು ರಾಜಧಾನಿಯಲ್ಲಿ ನೂತನವಾಗಿ ಆಯ್ಕೆಯಾದ ಎಸ್ ಡಿಪಿಐ ಕೇರಳ ರಾಜ್ಯ ಪದಾಧಿಕಾರಿಗಳಿಗೆ ನೀಡಿದ ಅಭಿನಂದನಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ವಿರೋಧ ಪಕ್ಷ ಇಲ್ಲದಂತಾಗಿದೆ. ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಇತರ ಸಮಾಜವಾದಿ ಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸಲು ಸಹ ಸಿದ್ಧರಿಲ್ಲ. ವಿರೋಧ ಪಕ್ಷಗಳು ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಕರ್ನಾಟಕದ ಕಾಂಗ್ರೆಸ್ ನಾಯಕ ಪರಮೇಶ್ವರ್ ಅವರು ಹೇಳುತ್ತಾರೆ, ಅಂದರೆ ಕಾಂಗ್ರೆಸ್ ಎತ್ತ ಸಾಗುತ್ತಿದೆ ಎಂದು ನಾವು ಅರಿಯಬೇಕಿದೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ಬಂಧಿಸಿದಾಗ, ಕಾಂಗ್ರೆಸ್ ಪಕ್ಷವು ಇಡೀ ದೇಶವೇ ಅಚ್ಚರಿಪಡುವಂತೆ ಹೋರಾಟ ನಡೆಸಬೇಕಿತ್ತು, ಆದರೆ ಅದು ಆಗಲಿಲ್ಲ ,ತನ್ನ ನಾಯಕಿಯ ಬಂಧನವಾದಾಗ ಸ್ಪಂದಿಸದ ಕಾಂಗ್ರೆಸ್ ನಿಂದ ಇಲ್ಲಿನ ಅಲ್ಪಸಂಖ್ಯಾತರ, ದಲಿತರ, ಶೋಷಿತರ ರಕ್ಷಣೆ ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.


ಭಾರತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಲವ್ ಜಿಹಾದ್ ಮತ್ತು ದನದ ಹೆಸರಿನಲ್ಲಿ ಮುಸ್ಲಿಮರನ್ನು ಕೊಲ್ಲಲಾಗುತ್ತಿದೆ. ದೇಶದಲ್ಲಿ ಆಡಳಿತ ಭಯೋತ್ಪಾದನೆ ತಾಂಡವವಾಡುತ್ತಿದೆ. ಹೈಕೋರ್ಟ್ ಆದೇಶವಿದ್ದರೂ ಒತ್ತುವರಿದಾರರು ಎಂಬ ಆರೋಪದಲ್ಲಿ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಸಾವಿರಾರು ಬಡವರನ್ನು ಒಕ್ಕಲೆಬ್ಬಿಸಿ ಹಲವರನ್ನು ಕೊಂದಿದೆ.


ದೇಶದ ಆರ್ಥಿಕ ಸ್ಥಿತಿ ಸಂಪೂರ್ಣ ಹದೆಗೆಟ್ಟಿದ್ದು, ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿದೆ. ದೇಶದ ಅಸ್ಮಿತೆ ಎನಿಸಿದ್ದ ದೇಶದ ಏಕೈಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಈಗಾಗಲೇ ಮಾರಾಟ ಮಾಡಿದೆ. ನೋಟು ನಿಷೇಧ ಎಂಬ ಐತಿಹಾಸಿಕ ತಪ್ಪು ನಿರ್ಧಾರ ಸಣ್ಣ ವ್ಯಾಪಾರಿಗಳನ್ನು ಒಳಗೊಂಡಂತೆ ದೇಶದ ಆರ್ಥಿಕತೆಯನ್ನು ಪಾತಾಳಕ್ಕಿಳಿಸಿದೆ ಎಂದು ಅಬ್ದುಲ್ ಮಜೀದ್ ವಾಗ್ದಾಳಿ ನಡೆಸಿದರು.ಕೋವಿಡ್ ರೋಗಿಗಳಿಗೆ ಸರಿಯಾದ ಆಮ್ಲಜನಕ ಹಾಗೂ ಬೆಡ್ ಸಿಗದೆ ಸಾವಿರಾರು ಜನರು ಸಾವನ್ನಪ್ಪಿದ ಘನಘೋರ ಘಟನೆಗೆ ನಾವು ಸಾಕ್ಷಿಯಾಗಿದೆವು.


ದೇಶದಲ್ಲಿ ಪ್ರಜಾಪ್ರಭುತ್ವ ಕುಸಿದು ಸರ್ವಾಧಿಕಾರದತ್ತ ಸಾಗುತ್ತಿದೆ. ಆರ್ಥಿಕತೆಯು ವಿಫಲವಾಗಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದ ಅವರು ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಲು ಎಸ್.ಡಿ.ಪಿ.ಐ. ಕಟಿಬದ್ಧವಾಗಿದೆ ಎಂದು ಹೇಳಿದರು.
ಅಟ್ಟಕ್ಕುಳಂಗರದಿಂದ ಆರಂಭಗೊಂಡ ಅಭಿನಂದನಾ ಜಾಥ ನಂದಾವನಂ ಮುಸ್ಲಿಂ ಅಸೋಸಿಯೇಶನ್ ಸಭಾಂಗಣದಲ್ಲಿ ಕೊನೆಗೊಂಡಿತು.ತಿರುವನಂತಪುರಂ ಜಿಲ್ಲಾಧ್ಯಕ್ಷ ಸಿಯಾದ್ ಕಂಡಲ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರಾಜ್ಯ ಪದಾಧಿಕಾರಿಗಳಿಗೆ ಸ್ವಾಗತ ನೀಡಲಾಯಿತು.


ಎಸ್ ಡಿಪಿಐ ರಾಜ್ಯಾಧ್ಯಕ್ಷ ಮುವಾಟ್ಟುಪುಝ ಅಶ್ರಫ್ ಮೌಲವಿ, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪಿ ಅಬ್ದುಲ್ ಮಜೀದ್ ಫೈಝಿ, ರಾಜ್ಯ ಉಪಾಧ್ಯಕ್ಷರಾದ ಪಿ ಅಬ್ದುಲ್ ಹಮೀದ್ ಮತ್ತು ತುಳಸಿಧರನ್ ಪಳ್ಳಿಕ್ಕಲ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರೋಯಿ ಅರಕ್ಕಲ್, ಪಿ ಕೆ ಉಸ್ಮಾನ್, ಅಜ್ಮಲ್ ಇಸ್ಮಾಯಿಲ್, ರಾಜ್ಯ ಕಾರ್ಯದರ್ಶಿಗಳಾದ ಕೆ.ಕೆ ಅಬ್ದುಲ್ ಜಬ್ಬಾರ್, ಪಿ.ಆರ್ ಸಿಯಾದ್, ಕೆ.ಎಸ್ ಶಾನ್, ಜಾನ್ಸನ್ ಕಂಡಚ್ಚಿರ, ಕೃಷ್ಣನ್ ಎರಾಂಜಿಕಲ್, ಪಿ ಜಮೀಲಾ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರು ಮತ್ತು ರಾಜ್ಯ ಸಮಿತಿ ಸದಸ್ಯರು ಭಾಗವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀರ್ ಆಜಾದ್, ಜಿಲ್ಲಾ ಉಪಾಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಖಜಾಂಚಿ ಉಪಸ್ಥಿತರಿದ್ದರು

Join Whatsapp
Exit mobile version