Home ಟಾಪ್ ಸುದ್ದಿಗಳು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಡಿ.17ರಂದು NSUI ಯಿಂದ ರಾಜ್ಯ ಮಟ್ಟದ ಬಂದ್

ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಡಿ.17ರಂದು NSUI ಯಿಂದ ರಾಜ್ಯ ಮಟ್ಟದ ಬಂದ್

ಬೆಂಗಳೂರು: ವಿದ್ಯಾರ್ಥಿ ವೇತನ, ಸಾರಿಗೆ ವ್ಯವಸ್ಥೆ, ಫಲಿತಾಂಶ ವಿಳಂಬ, ಉಚಿತ ಬಸ್ ಪಾಸ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.17ರಂದು ರಾಜ್ಯ ಮಟ್ಟದ ಬಂದ್ ಗೆ ಎನ್ ಎಸ್ ಯು ಐ ನೇತೃತ್ವ ವಹಿಸುತ್ತಿದೆ ಎಂದು ಎನ್ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಡಿನ ಪ್ರಗತಿಗೆ ಮುಖ್ಯವಾದುದು ವಿದ್ಯಾರ್ಥಿಗಳು ಹಾಗೂ ಅವರಿಗೆ ಶಿಕ್ಷಣ ನೀಡುವುದಾಗಿದೆ. ಇಂದು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡದಂತೆ ಸರ್ಕಾರ ನೀತಿ ರೂಪಿಸುತ್ತಿವೆ. ಹಿಂದೆ ಎಲ್ಲ ಸರ್ಕಾರಗಳು ವಿದ್ಯಾರ್ಥಿಗಳು ಓದಬೇಕು ಎಂದು ವಿದ್ಯಾರ್ಥಿ ವೇತನ, ಬ್ಯಾಂಕ್ ಸಾಲ, ಸಾರಿಗೆ ವ್ಯವಸ್ಥೆ, ಬಸ್ ಪಾಸ್ ನೀಡುತ್ತಿದ್ದವು. ಆದರೆ ಇಂದು ವಿದ್ಯಾಭ್ಯಾಸ ಆಗದಂತೆ ಮಾಡುತ್ತಿದ್ದಾರೆ ಎಂದರು.

ಈ ಹಿಂದೆ ಫಲಿತಾಂಶಗಳು ನಿಗದಿತ ಅವಧಿಗಿಂತ ಕೆಲ ದಿನ ಮುಂಚಿತವಾಗಿ ಅಥವಾ ಕೆಲ ದಿನ ತಡವಾಗಿ ಬರುತ್ತಿದ್ದವು. ಆದರೆ ಈಗ ಪರೀಕ್ಷೆ ನಡೆದು ಒಂದು ವರ್ಷವಾಗಿದ್ದರೂ ಫಲಿತಾಂಶ ನೀಡಲು ತಯಾರಿಲ್ಲ. ಇದನ್ನು ಪ್ರಶ್ನಿಸಿದರೆ ಒಬ್ಬರೂ ಮತ್ತೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ. ನೀವು ಯಾವುದೇ ಕಾಲೇಜು, ವಿವಿಗೆ ಹೋಗಿ ಎನ್ಇಪಿ ಅಂದರೆ ಏನು ಎಂದು ಹೋಗಿ ಕೇಳಿ. ಅವರು ನಮಗೆ ಗೊತ್ತಿಲ್ಲ. ಸರ್ಕಾರ ಜಾರಿಗೆ ತಂದಿದೆ ಸರ್ಕಾರ ನೌಕರರು ನಾವು ಇದರ ಬಗ್ಗೆ ಧ್ವನಿ ಎತ್ತುವಂತಿಲ್ಲ ಎಂದು ಪ್ರಾಂಶುಪಾಲರು ಹೇಳುತ್ತಾರೆ ಎಂದು ತಿಳಿಸಿದರು.

ಇನ್ನು ವಿದ್ಯಾರ್ಥಿ ವೇತನ ವಿಚಾರಕ್ಕೆ ಬಂದರೆ ಕೋವಿಡ್ ಸಮಯದಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಆ ಮೊತ್ತ ಸರ್ಕಾರದ ಬಳಿಯೇ ಇದೆ. ಕೋವಿಡ್ ನಂತರವೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಸುಮಾರು 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಶಿಕ್ಷಣ ನಿಲ್ಲಿಸಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕಾಲೇಜಿನಲ್ಲಿ ನಿನ್ನ ವಿದ್ಯಾರ್ಥಿ ವೇತನ ಹಣ ಬಂದಿಲ್ಲ, ನೀನೇ ಶುಲ್ಕ ಪಾವತಿ ಮಾಡು ಎಂದು ಒತ್ತಡ ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ನಿಲ್ಲಿಸಬೇಕಾಗುತ್ತದೆ. ಈ ಸಮಯದಲ್ಲಿ 10ನೇ ಹಾಗೂ ಪಿಯುಸಿ ಅಂಕಪಟ್ಟಿಯನ್ನು ನೀಡದೇ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಶುಲ್ಕ ನೀಡಿದರೆ ಹಿಂದಿರುಗಿಸುವುದಾಗಿ ಹೇಳುತ್ತಾರೆ.ಇನ್ನು ರಾಜ್ಯದ ಶೇ.90ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಹಿಂದಿನ ಸರ್ಕಾರಗಳು ಉಚಿತ ಬಸ್ ಪಾಸ್ ನೀಡಿದ್ದವು. ಆದರೆ ಈಗ ಪರಿಶಿಷ್ಟ ಸಮುದಾಯದವರಿಗೆ ಉಚಿತ ಪಾಸ್ ನೀಡಿದ್ದು, ಇದರ ಬಗ್ಗೆ ನಮಗೆ ಆಕ್ಷೇಪವಿಲ್ಲ. ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು. ಬಸ್ ಕೊರತೆಯಿಂದ ಕಾಲೇಜು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದರು.

ಇನ್ನು ಸರ್ಕಾರಿ ಕಾಲೇಜುಗಳಲ್ಲಿ ಖಾಸಗಿ ಕಾಲೇಜು ರೀತಿಯಲ್ಲಿ ಶುಲ್ಕ ಏರಿಕೆ ಮಾಡಲಾಗಿದೆ. ಖಾಸಗಿ ಕಾಲೇಜಿನ ಜತೆ ಸ್ಪರ್ಧೆಗಿಳಿದು ಶುಲ್ಕ ಏಱಿಕೆ ಮಾಡುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸರ್ಕಾರ, ವಿವಿಗಳಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ರಾಜ್ಯದ ಎಲ್ಲ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದು ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಲು ರಾಜ್ಯಾದ್ಯಂತ ಡಿ.17ರಂದು ರಾಜ್ಯ ಮಟ್ಟದ ಬಂದ್ ಗೆ ಕರೆ ನೀಡಲಾಗುತ್ತಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಆಕ್ರೋಶ ಮತ್ತಷ್ಟು ಹೆಚ್ಚಲಿದೆ ಎಂದರು.

ಬೆಂಗಳೂರು ವಿವಿ ಎನ್ಎಸ್ ಯು ಐ ಅಧ್ಯಕ್ಷ ಲಕ್ಷ್ಯರಾಜ್ ಮಾತನಾಡಿ,ರಾಜ್ಯದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಫಲಿತಾಂಶ ಸಿಗುತ್ತಿಲ್ಲ, ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಉಚಿತ ಬಸ್ ಪಾಸ್ ನೀಡುತ್ತಿಲ್ಲ, ಸರ್ಕಾರಿ ಶಿಕ್ಷಣ ಕೇಂದ್ರಗಳಲ್ಲಿ ಶುಲ್ಕ ಏರಿಕೆ, ವಿದ್ಯಾರ್ಥಿ ನಿಲಯಗಳ ಸೌಲಭ್ಯಗಳಿಲ್ಲ. ಇದೆಲ್ಲದರ ಜತೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಇದೆಲ್ಲದರಿಂದ ಮನನೊಂದು ಹಲವು ವಿದ್ಯಾರ್ಥಿಗಳು ರಾಜ್ಯಾದ್ಯಂತ ಎನ್ಎಸ್ ಯೂಐಗೆ ದೂರು ಸಲ್ಲಿಸಿದ್ದಾರೆ. ಇದನ್ನು ಮಾಧ್ಯಮಗಳ ಮುಂದೆ ಇಟ್ಟು ವಿದ್ಯಾರ್ಥಿಗಳ ಧ್ವನಿಯಾಗುತ್ತಿದ್ದೇವೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಎರಡು ರೀತಿಯ ವಿದ್ಯಾರ್ಥಿ ವೇತನ ಸಿಗುತ್ತಿವೆ. ಎನ್ಎಸ್ ಪಿ (ನ್ಯಾಷನಲ್ ಸ್ಕಾಲರ್ ಶಿಪ್) ಹಾಗೂ ಎಸ್ಎಸ್ ಪಿ (ಸ್ಟೇಟ್ ಸ್ಕಾಲರ್ ಶಿಪ್) ಮೂಲಕ ವಿದ್ಯಾರ್ಥಿ ವೇತನ ಸೀಗುತ್ತಿವೆ. ಎನ್ಎಸ್ ಪಿ ಮೂಲಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಒಬ್ಬ ವಿದ್ಯಾರ್ಥಿ 2019ರಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದ್ದು, ನಾಲ್ಕು ವರ್ಷಗಿಳಿಂದ ಈ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಪ್ರತಿ ಬಾರಿ ಅರ್ಜಿ ಸಲ್ಲಿಸುವಾಗ ಜಾಲತಾಣಗಳಲ್ಲಿ ಸಮಸ್ಯೆ ಎದುರಾಗುತ್ತಿವೆ. ಫಲಿತಾಂಶ ವಿಳಂಬದಿಂದ ಈ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಅರ್ಜಿ ಹಾಕಲು ಸಾಧ್ಯವಾಗಿಲ್ಲ. ಇದು ಕೇವಲ ಒಬ್ಬ ವಿದ್ಯಾರ್ಥಿ ಸಮಸ್ಯೆಯಲ್ಲ ರಾಜ್ಯದ ಹಲವು ವಿದ್ಯಾರ್ಥಿಗಳ ಸಮಸ್ಯೆ ಎಂದರು.

ಇನ್ನು ಎಸ್ ಎಸ್ ಪಿ ಮೂಲಕ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಒಬ್ಬ ವಿದ್ಯಾರ್ಥಿನಿ 2020 ಜನವರಿಯಲ್ಲಿ ಅರ್ಜಿ ಹಾಕಿದ್ದು, ಇದುವರೆಗೂ ವಿದ್ಯಾರ್ಥಿ ವೇತನ ಸಿಕ್ಕಿಲ್ಲ. ಇನ್ನು ಇತ್ತೀಚೆಗೂ ಅವರು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದ್ದು, ಇದಕ್ಕೂ ಯಾವುದೇ ಉತ್ತರ ಸಿಕ್ಕಿಲ್ಲ. ಇನ್ನು ಅರ್ಜಿ ಹಾಕುವಾಗ ನಿಮ್ಮ ವಿವಿಯು ನಿಮ್ಮ ಫಲಿತಾಂಶ, ನಿಮ್ಮ ಅಡ್ಮಿಷನ್ ದಿನಾಂಕವನ್ನು ಫೋರ್ಟಲ್ ಗೆ ಸಲ್ಲಿಕೆ ಮಾಡಿಲ್ಲ ಹೀಗಾಗಿ ನೀವು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಸಾಧ್ಯವಾಗುವುದಿಲ್ಲ ಎಂಬ ಸಂದೇಶವನ್ನು ಪೋರ್ಟಲ್ ನಲ್ಲಿ ತೋರಿಸಲಾಗುತ್ತಿದೆ. ಇನ್ನು ವಿನಾಕಾರಣ ಅರ್ಜಿ ತಿರಸ್ಕರಿಸಲಾಗುತ್ತಿದೆ.

ಇನ್ನು ಎನ್ಇಪಿ ವಿಚಾರದಲ್ಲಿ ರಾಜ್ಯ ಸರ್ಕಾರ ದೊಡ್ಡ ಸಾಧನೆ ಮಾಡಿರುವುದಾಗಿ ಹೇಳುತ್ತಿದ್ದಾರೆ. ಈ ನೀತಿ ಯಾವ ರೀತಿ ಜಾರಿಯಾಗಬೇಕು ಎಂಬ ವ್ಯವಸ್ಥಿತ ತಯಾರಿ ಇಲ್ಲದೇ ತರಾತುರಿಯಲ್ಲಿ ಜಾರಿಗೆ ತಂದ ಪರಿಣಾಮ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಬೆಂಗಳೂರು ನಗರ ವಿವಿಯಲ್ಲಿ ಪರೀಕ್ಷೆ 20-05-2022ಕ್ಕೆ ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆಯು 15-06-2022 ಮುಕ್ತಾಯವಾಗಿದೆ. ಈ ಹಿಂದೆ ಆಯಾ ವಿವಿಗೆ ಪ್ರತ್ಯೇಕ ಆಪ್ ಸೌಲಭ್ಯವಿತ್ತು. ಇದರ ಬಳಕೆ ಅವಕಾಶ ವಿದ್ಯಾರ್ಥಿ, ಪ್ರಾದ್ಯಾಪಕರು, ಪ್ರಾಂಶುಪಾಲರಿಗೆ ಇತ್ತು. ಆದರೆ ಎನ್ ಇಪಿ ಜಾರಿ ನಂತರ ರಾಜ್ಯ ಸರ್ಕಾರ ಯುಯುಸಿಎಂಎಸ್ ಎಂಬ ಪೋರ್ಟಲ್ ಮಾಡಿ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಲು ಮುಂದಾಗುತ್ತದೆ. ಇದರ ಪರಿಣಾಮವಾಗಿ ಎನ್ಇಪಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಫಲಿತಾಂಶ ಸಿಕ್ಕಿಲ್ಲ ಎಂದರು.

ಇತ್ತೀಚೆಗೆ ಬೆಂಗಳೂರು ವಿವಿ ಹಾಗೂ ಬೆಂಗಳೂರು ಉತ್ತರ ವಿವಿಯಲ್ಲಿ ಫಲಿತಾಂಶ ಸಿಕ್ಕಿದ್ದು, ಬಿಕಾಂ ಪರೀಕ್ಷೆ ಇನ್ನು ಕೊಟ್ಟಿಲ್ಲ. ಬೆಂಗಳೂರು ನಗರ ವಿವಿಯಲ್ಲಿ ಇದುವರೆಗೂ ಯಾವುದೇ ಎನ್ಇಪಿ ಪರೀಕ್ಷೆ ಫಲಿತಾಂಶ ನೀಡಿಲ್ಲ. ರಾಜ್ಯದ ಎಲ್ಲ ವಿವಿಗಳು ಎನ್ಇಪಿ ಪರೀಕ್ಷೆಗಳ ಫಲಿತಾಂಶವನ್ನು ನಿಗದಿತ ಸಮಯಕ್ಕೆ ನೀಡುತ್ತಿಲ್ಲ. ವಿದ್ಯಾರ್ಥಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವಾಗ ತನ್ನ ಪರೀಕ್ಷೆಯ ಫಲಿತಾಂಶದ ಪಟ್ಟಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಆದರೆ ಇವರು ಒಂದು ವರ್ಷಗಳಿಂದ ಫಲಿತಾಂಶ ನೀಡುತ್ತಿಲ್ಲ ಎಂದರೆ ಅವರು ವಿದ್ಯಾರ್ಥಿ ವೇತನ ಪಡೆಯುವುದಾದರೂ ಹೇಗೆ? ವಿವಿಗಳಿಗೆ ಫಲಿತಾಂಶವನ್ನು ನೀಡಲು ಸಾಧ್ಯವಾಗದಿದ್ದರೆ ಇವರು ಏನು ಮಾಡಲು ಹೊರಟಿದ್ದಾರೆ? ವಿದ್ಯಾರ್ಥಿ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡುವುದು ತಡವಾದರೆ ಪ್ರತಿನಿತ್ಯ 200ರಿಂದ 500 ರೂ ದಂಡ ಹಾಕುತ್ತಾರೆ. ಆದರೆ ಇವರು ಫಲಿತಾಂಶವನ್ನು ಒಂದು ವರ್ಷಗಳಿಂದ ನೀಡಿಲ್ಲವಾದರೆ ವಿದ್ಯಾರ್ಥಿಗಳು ಇವರಿಗೆ ಎಷ್ಟು ದಂಡ ಹಾಕಬೇಕು ಎಂದು ಶಿಕ್ಷಣ ಸಚಿವರು ಉತ್ತರ ನೀಡಬೇಕು ಎಂದು ಹೇಳಿದ್ದಾರೆ.

ವಿದ್ಯಾರ್ಥಿ ಸಂಘಟನೆಗಳ ಮೂಲಕ ವಿವಿಗಳಿಗೆ ಹಲವು ಬಾರಿ ಮನವಿ ಮಾಡಿದ್ದು, ಮಾನವಸಂಪನ್ಮೂಲ ಕೊರತೆ ಇದೆ ಎಂದು ಹೇಳುತ್ತಾರೆ. ರಾಜ್ಯದ ಎಲ್ಲ ವಿವಿಗಳಲ್ಲಿ ಮರುಮೌಲ್ಯಮಾಪನಕ್ಕೆ ಸುಮಾರು 1500-1800 ರೂ.ವರೆಗೆ ಶುಲ್ಕ ಪಡೆಯುತ್ತಿವೆ. ಆದರೆ ಬೆಂಗಳೂರು ನಗರ ವಿವಿಯು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 3065 ರೂ. ಶುಲ್ಕ ಪಡೆಯುತ್ತಿದ್ದಾರೆ. ಈ ದುಬಾರಿ ಶುಲ್ಕ ಯಾಕೆ ಎಂದು ಕೇಳಿದರೆ ಅದಕ್ಕೆ ಸ್ಪಷ್ಟನೆ ನೀಡುತ್ತಿಲ್ಲ. ಇಂದು ಈ ಶುಲ್ಕ ಕಟ್ಟಲು ಕಡೇ ದಿನಾಂಕವಾಗಿವೆ. ಬೆಂಗಳೂರು ವಿವಿಯ ಅಫಿಲಿಯೇಟೆಡ್ ಕಾಲೇಜಿನಲ್ಲಿ ಪರೀಕ್ಷೆ ಬರೆದ ಕೃತಿಕಾ ಎಂಬ ವಿದ್ಯಾರ್ಥಿನಿ ಅಡ್ವಾನ್ಸ್ ಕಾರ್ಪೊರೇಟಿಂಗ್ ಅಕೌಂಟ್ ಪತ್ರಿಕೆಯಲ್ಲಿ ಫಲಿತಾಂಶದ ದಿನ ಆಕೆ ಅನುತ್ತೀರ್ಣರಾಗಿದ್ದಾರೆ ಎಂದು ಫಲಿತಾಂಶ ಬರುತ್ತದೆ. ಮತ್ತೊಂದು ಪೋರ್ಟಲ್ ನಲ್ಲಿ ಆಕೆ ಪರೀಕ್ಷೆಗೆ ಗೈರಾಗಿದ್ದಾರೆ ಎಂದು ತೋರಿಸುತ್ತಿದೆ. ಇನ್ವಿಜಿಲೇಟರ್ ಸಹಿಮಾಡಿರುವ ಬುಕ್ ಲೆಟ್ ಹಾಗೂ ಹಾಲ್ ಟಿಕೆಟ್ ಇರುವಾಗ ಈ ವಿದ್ಯಾರ್ಥಿ ಗೈರಾಗಿರುವುದು ಹೇಗೆ? ವಿವಿಗಳು ಫಲಿತಾಂಶ ಹಾಗೂ ಪೋರ್ಟಲ್ ಗಳನ್ನು ಹೇಗೆ ನಿಭಾಯಿಸುತ್ತಿವೆ ಎಂಬುದು ಇದರಿಂದ ತಿಳಿಯುತ್ತದೆ. ಇದು ಕೇವಲ ಈಕೆಯ ಸಮಸ್ಯೆ ಮಾತ್ರವಲ್ಲ. ಇದೇ ರೀತಿ ಹಲವು ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ.

ರಾಜ್ಯದಲ್ಲಿ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ವಿದ್ಯಾರ್ಥಿಗಳು ಬಸ್ ಸಾರಿಗೆ ವ್ಯವಸ್ಥೆ ವಿಚಾರವಾಗಿ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ತನ್ನ ಕಾರ್ಯಕ್ರಮಕ್ಕೆ ಸಾಕಷ್ಟು ವಿದ್ಯಾರ್ಥಿಗಳನ್ನು ಸರ್ಕಾರಿ ಬಸ್ ಗಳಲ್ಲಿ ಕರೆದುಕೊಂಡು ಹೋಗುತ್ತಾರೆ. ಮರುದಿನ ಬಸ್ ಕೊರತೆ ಎದುರಾಗಿ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಾರೆ. ಇದರಿಂದಾಗಿ ಇರುವ ಬಸ್ ಗಳಲ್ಲಿ ಸಾಮರ್ಥ್ಯಕ್ಕೂ ಮೀರಿದ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡಬೇಕಾಗುತ್ತದೆ. ಇದೇ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

ಇನ್ನು ಸರ್ಕಾರ ಪರಿಶಿಷ್ಟ  ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುತ್ತಿದೆ. ಅದೇ ರೀತಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು. ನಮ್ಮ ಸರ್ಕಾರದ ಅವಧಿಯಲ್ಲೂ ನಾವು ಇದನ್ನು ಆಗ್ರಹ ಮಾಡಿದ್ದೆವು. ಈಗಲೂ ನಾವು ನಮ್ಮ ಬೇಡಿಕೆಯನ್ನು ಮುಂದಿಡುತ್ತಿದ್ದೇವೆ. ಸರ್ಕಾರಿ ಕಾಲೇಜುಗಳಲ್ಲಿ ಎನ್ ಇಪಿ ಬಂದ ನಂತರ ವಿವಿಧ ಕಾಲೇಜುಗಳಲ್ಲಿ ಶುಲ್ಕ ಪ್ರಮಾಣ 3-4 ಸಾವಿರ ಇತ್ತು. ಆದರೆ ಇಂದು ಎರಡು ಮೂರು ಪಟ್ಟು ಹೆಚ್ಚಿನ ಶುಲ್ಕ ನಿಗದಿ ಮಾಡಲಾಗಿದೆ. ಶುಲ್ಕ ಏರಿಕೆ ಯಾಕೆ ಮಾಡಲಾಗಿದೆ ಎಂದು ಪ್ರಶ್ನಿಸಿದರೆ ಉತ್ತರ ನೀಡುತ್ತಿಲ್ಲ. ರಾಜ್ಯದಲ್ಲಿ ಖಾಸಗಿ ಕಾಲೇಜುಗಳಿಗೆ ಹೋಗಲು ಸಾಧ್ಯವಾಗದ ಮಕ್ಕಳು ಸರ್ಕಾರಿ ಕಾಲೇಜುಗಳಿಗೆ ಹೋಗುತ್ತಿದ್ದಾರೆ.  ಆದರೆ ವರ್ಷದಿಂದ ವರ್ಷ ಸಾವಿರಾರು ರೂ ಹೆಚ್ಚಳ ಮಾಡುತ್ತಿದ್ದರೆ. 2020ರಲ್ಲಿ 8 ಸಾವಿರ ಇದ್ದ ಶುಲ್ಕ ಈ ಬಾರಿ 13-14 ಸಾವಿರಕ್ಕೆ ಏರಿಸಿದ್ದಾರೆ.

ಹೀಗಾಗಿ ಎನ್ಎಸ್ ಯುಐ ಸಂಘಟನೆಯು ಪ್ರಮುಖ ಆಗ್ರಹವನ್ನು ಸರ್ಕಾರದ ಮುಂದೆ ಇಡುತ್ತಿದೆ. ರಾಜ್ಯದ ಎಲ್ಲಾ ವಿವಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷೆ ಫಲಿತಾಂಶ ನೀಡಬೇಕು. ವಿದ್ಯಾರ್ಥಿಗಳು ಸಾರಿಗೆ ಸಮಸ್ಯೆ ಅನುಭವಿಸುತ್ತಿದ್ದು, ಇದನ್ನು ಸರಿಪಡಿಸಬೇಕು. ಸರ್ಕಾರಿ ಕಾಲೇಜು ಶುಲ್ಕ ಏರಿಕೆ ಮಾಡಲಾಗಿದ್ದು, ಅದನ್ನು ಸರಿಪಡಿಸಬೇಕು ಎಂದರು.

Join Whatsapp
Exit mobile version