Home ಟಾಪ್ ಸುದ್ದಿಗಳು ಉಕ್ರೇನ್ ನಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಕ್ಯಾಂಪಸ್ ಫ್ರಂಟ್ ಕಿಡಿ

ಉಕ್ರೇನ್ ನಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಕ್ಯಾಂಪಸ್ ಫ್ರಂಟ್ ಕಿಡಿ

ಬೆಂಗಳೂರು: ಯುದ್ಧಪೀಡಿತ ರಾಷ್ಟ್ರವಾದ ಉಕ್ರೇನ್ ನಲ್ಲಿ ನಮ್ಮ ದೇಶದ ಹಲವಾರು ವಿದ್ಯಾರ್ಥಿಗಳು ಉನ್ನತ ವಿದ್ಯಾರ್ಜನೆಗಾಗಿ ತೆರಳಿ ಸಿಲುಕಿದ್ದಾರೆ. ರಕ್ಷಣೆಗಾಗಿ ಭಾರತದ ರಾಯಭಾರಿ ಕಚೇರಿ ಮತ್ತು ಪ್ರಧಾನಿ, ಸಚಿವರನ್ನು ಪರಿಪರಿಯಾಗಿ ವಿನಂತಿಸುತ್ತಿದ್ದರೂ ಇನ್ನೂ ಕೂಡ ಯುದ್ಧಪೀಡಿತ ರಾಷ್ಟ್ರದಲ್ಲಿ ಜೀವಭಯದಿಂದ ಕಂಗಾಲಾಗಿದ್ದಾರೆ. ಆ ಪೈಕಿ ರಾಜ್ಯದ ನವೀನ್ ಎಂಬ ವಿದ್ಯಾರ್ಥಿ ರಷ್ಯಾದ ರಾಕೆಟ್ ದಾಳಿಗೆ ಬಲಿಯಾಗಿದ್ದಾರೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ತಮ್ಮ ಪ್ರಜೆಗಳ ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯುದ್ಧ ಪೀಡಿತ ರಾಷ್ಟ್ರಗಳಿಂದ ತಮ್ಮ ಪ್ರಜೆಗಳ ರಕ್ಷಣೆ ಮಾಡುವುದು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ರಾಯಭಾರಿ ಕಚೇರಿ ಮತ್ತು ವಿದೇಶಾಂಗ ಇಲಾಖೆಯೊಂದಿಗೆ ಸರಿಯಾದ ಸಮಾಲೋಚನೆ ನಡೆಸಿಕೊಂಡು ತುರ್ತಾಗಿ ಕದನಪೀಡಿತ ದ್ವಿರಾಷ್ಟ್ರಗಳಿಂದ ವಿದ್ಯಾರ್ಥಿಗಳು ಸೇರಿ ಭಾರತೀಯ ಎಲ್ಲಾ ಪ್ರಜೆಗಳನ್ನು ರಕ್ಷಿಸಬೇಕಿತ್ತು. ಆದರೆ ಒಕ್ಕೂಟ ಸರ್ಕಾರ ಇದರಲ್ಲಿ ಸಂಪೂರ್ಣ ವಿಫಲವಾಗಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದು ಅವರು ದೂರಿದ್ದಾರೆ.

ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕದನ ಪೀಡಿತ ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಸಹಿತ ಎಲ್ಲ ಭಾರತೀಯರನ್ನು ರಕ್ಷಣೆ ಮಾಡಬೇಕು. ದೇಶದ ಜನರು ವಿದೇಶಗಳಲ್ಲಿ ಜೀವದ ಅಪಾಯವನ್ನೆದುರಿಸುವಾಗ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ಬೇಜವಾಬ್ದಾರಿಯಿಂದ ವರ್ತಿಸುವ ಪರಿಣಾಮವೇ ಕರ್ನಾಟಕ ಇಂದು ಒಂದು ಅಮೂಲ್ಯ ಜೀವವನ್ನು ಕಳೆದುಕೊಂಡಿದೆ. ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ ತಕ್ಷಣವೇ ಪರಿಹಾರ ಘೋಷಣೆ ಮಾಡಬೇಕು ಎಂದು ಅಥಾವುಲ್ಲ ಪುಂಜಾಲಕಟ್ಟೆ ಒತ್ತಾಯಿಸಿದ್ದಾರೆ.

Join Whatsapp
Exit mobile version