Home ಟಾಪ್ ಸುದ್ದಿಗಳು ಹಿಜಾಬ್ | ಪ್ರಾಂಶುಪಾಲರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡುವ ಮೂಲಕ ಸಂಘಪರಿವಾರ ನಿಷ್ಠರನ್ನು ಪ್ರೊತ್ಸಾಹಿಸುತ್ತಿದೆ: ಭಾಸ್ಕರ್...

ಹಿಜಾಬ್ | ಪ್ರಾಂಶುಪಾಲರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡುವ ಮೂಲಕ ಸಂಘಪರಿವಾರ ನಿಷ್ಠರನ್ನು ಪ್ರೊತ್ಸಾಹಿಸುತ್ತಿದೆ: ಭಾಸ್ಕರ್ ಪ್ರಸಾದ್

ಬೆಂಗಳೂರು: ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರದಬ್ಬಿ ಖುದ್ದು ಗೇಟ್ ಹಾಕಿದ್ದ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ ಅವರಿಗೆ ರಾಜ್ಯ ಸರ್ಕಾರ ಶಿಕ್ಷಕರ ದಿನಾಚರಣೆ 2023-2024ನೇ ಸಾಲಿನ ರಾಜ್ಯಮಟ್ಟದ ಪ್ರಾಚಾರ್ಯ ಪ್ರಶಸ್ತಿ ನೀಡಿವುದು ಅತ್ಯಂತ ಖಂಡನೀಯ. ಇದು ಸಂಘಪರಿವಾರದ ನಿಷ್ಠರನ್ನು ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಹಿಂಬಾಗಿಲಿನಿಂದ ಬೆಂಬಲಿಸಿ ಪ್ರೋತ್ಸಾಹಿಸುತ್ತದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಮುಸ್ಲಿಮರ ಹಿತ ಕಾಯುವ ವಾಗ್ದಾನ ನೀಡಿ ಮುಸ್ಲಿಂ ಸಮುದಾಯದ ಅಷ್ಟೂ ಮತಗಳನ್ನು ಪಡೆದುಕೊಂಡ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರ ಬೆನ್ನಿಗೆ ಒಂದರ ನಂತರ ಒಂದು ಚೂರಿ ಹಾಕುತ್ತಲೇ ಇದೆ. ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಪ್ರಭಾಕರ್ ಭಟ್, ಹರೀಶ್ ಪೂಂಜಾ, ಭರತ್ ಶೆಟ್ಟಿ, ಪುತ್ತಿಲ ಮುಂತಾದ ಕೋಮುವಾದಿಗಳ ವಿರುದ್ಧ ಸಣ್ಣ ಕ್ರಮವೂ ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಜೊತೆಗೆ ಮುಸ್ಲಿಮರ ಮೀಸಲಾತಿ ಮರುಸ್ಥಾಪನೆ, ಹಿಂದುತ್ವ ಗೂಂಡಾ ಪಡೆಗಳ ಗೋ ಭಯೋತ್ಪಾದನೆ, ಅನೈತಿಕ ಪೊಲೀಸ್ ಗಿರಿ ಸೇರಿದಂತೆ ಅಲ್ಪಸಂಖ್ಯಾತನ್ನು ಬಾಧಿಸುತ್ತಿರುವ ಯಾವೊಂದು ವಿಚಾರದಲ್ಲೂ ಸಿದ್ದರಾಮಯ್ಯರವರ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಬದಲಾಗಿ ಅಂತವರನ್ನು ಕದ್ದುಮುಚ್ಚಿ ಅನ್ಯಮಾರ್ಗಗಳಲ್ಲಿ ರಕ್ಷಿಸಿಕೊಂಡು ಬರುತ್ತಿದೆ. ಅದರ ಭಾಗವಾಗಿ ಈ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಡಲು ಸಂಘಪರಿವಾರ ಹೂಡಿದ ಅತಿದೊಡ್ಡ ಷಡ್ಯಂತ್ರಕ್ಕೆ ಬೆಂಬಲವಾಗಿ ನಿಂತು ಅವರ ದುರುದ್ದೇಶ ಈಡೇರಲು ನಿಷ್ಠರಾಗಿ ನಿಂತ ಕುಂದಾಪುರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅವರಿಗೆ ಉನ್ನತ ಮಟ್ಟದ ಪ್ರಶಸ್ತಿ ನೀಡುವ ಮೂಲಕ ಮತ್ತೊಮ್ಮೆ ಈ ಕಾಂಗ್ರೆಸ್ ತಾವು ಅಂತರಾಳದಲ್ಲಿ “ಸಂಘಿಗಳು” ಎಂದು ನಿರೂಪಿಸಿದೆ ಎಂದು ಭಾಸ್ಕರ್ ಪ್ರಸಾದ್ ತಮ್ಮ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರ ಸರ್ಕಾರ ತಮ್ಮ ಈ ಕುತಂತ್ರಿ ಬುದ್ದಿಯನ್ನು ಬದಿಗಿಟ್ಟು ವಿವೇಚನೆಯಿಂದ ಯೋಚಿಸಬೇಕು. ಸಂಘಪರಿವಾರದ ಅಣತಿಯಂತೆ ಹಣ್ಣುಮಕ್ಕಳನ್ನು ಅವಮಾನಿಸಿದ, ಅವರ ಶಿಕ್ಷಣಕ್ಕೆ ಅಡ್ಡಿಪಡಿಸಿದ ರಾಮಕೃಷ್ಣ ಬಿ.ಜಿ ಅವರಿಗೆ ಘೋಷಿಸಿರುವ ಪ್ರಶಸ್ತಿಯನ್ನು ತಕ್ಷಣ ರದ್ದುಮಾಡಬೇಕು. ಆ ಮೂಲಕ ಹಿಜಾಬ್ ಪ್ರಕರಣದಿಂದ ಆಘಾತಕ್ಕೊಳಗಾದ ಕರ್ನಾಟಕದ ಇಡೀ ಮುಸ್ಲಿಂ ಸಮುದಾಯದ ಭಾವನೆಗಳನ್ನು ಗೌರವಿಸಬೇಕು ಎಂದು ಭಾಸ್ಕರ್ ಪ್ರಸಾದ್ ತಮ್ಮ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp
Exit mobile version