Home ಟಾಪ್ ಸುದ್ದಿಗಳು ಶಾಸಕರ ತರಬೇತಿ ಶಿಬಿರದಿಂದ ಗುರುರಾಜ ಕರ್ಜಗಿ, ರವಿಶಂಕರ್ ಗುರೂಜಿ ಔಟ್?

ಶಾಸಕರ ತರಬೇತಿ ಶಿಬಿರದಿಂದ ಗುರುರಾಜ ಕರ್ಜಗಿ, ರವಿಶಂಕರ್ ಗುರೂಜಿ ಔಟ್?

ಮಂಗಳೂರು: ರಾಜ್ಯ ವಿಧಾನಸಭೆಗೆ ಆಯ್ಕೆಯಾದ 70 ಮಂದಿ ನೂತನ ಶಾಸಕರಿಗಾಗಿ ವಿಧಾನಸಭಾ ಸಚಿವಾಲಯದಿಂದ  ಆಯೋಜನೆಯಾಗಿರುವ ಮೂರು ದಿನಗಳ ತರಬೇತಿ ಶಿಬಿರದ ಆಹ್ವಾನಿತರಲ್ಲಿ ಬದಲಾವಣೆ ಮಾಡಲಾಗಿದ್ದು, ಗುರುರಾಜ ಕರ್ಜಗಿ ಮತ್ತು ರವಿಶಂಕರ್ ಗುರೂಜಿ ಅವರನ್ನು ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.  

ಶಿಬಿರಕ್ಕೆ ಆಹ್ವಾನಿತರಾಗಿದ್ದ ಶಿಕ್ಷಣ ತಜ್ಞ ಪ್ರೊ. ಗುರುರಾಜ ಕರ್ಜಗಿ ಅವರ ಬದಲು ಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರ ಹೆಸರು ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ.

ಸ್ಪೀಕರ್‌ ಯು.ಟಿ. ಖಾದರ್‌ ಅವರ ನೇತೃತ್ವದಲ್ಲಿ ಜೂನ್ 26ರಿಂದ 28ರವರೆಗೆ ನೆಲಮಂಗಲದಲ್ಲಿರುವ ಕ್ಷೇಮವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಈ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಆರ್ಟ್‌ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ, ರಾಜಯೋಗಿನಿ ಬ್ರಹ್ಮಕುಮಾರಿ ಆಶಾ ದೀದಿ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹಾಗೂ ಜಮಾತೆ ಇಸ್ಲಾಮಿ ಹಿಂದ್‌ನ ಮುಹಮ್ಮದ್ ಕುಂಙ ಅವರನ್ನು ಆಹ್ವಾನಿಸಲಾಗಿತ್ತು.

ಆದರೆ, ಈ ಆಹ್ವಾನಿತರ ಬಗ್ಗೆ ಪ್ರಗತಿಪರ ಸಾಹಿತಿಗಳು ಮತ್ತು ಕೆಲವು ಕಾಂಗ್ರೆಸ್‌ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಸ್ಪೀಕರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಗತಿಪರರು ಪತ್ರ ಬರೆದಿದ್ದರು. ಸ್ಪೀಕರ್‌ ಅವರ ನಿರ್ಧಾರದಲ್ಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಲಾಗದು ಎಂಬ ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಪತ್ರವನ್ನು ಸ್ಪೀಕರ್‌ ಅವರಿಗೆ ಪತ್ರವನ್ನು ರವಾನಿಸಿ ಪರಿಶೀಲಿಸುವಂತೆ ಮನವಿ ಮಾಡಿದ್ದರು.

ಇದೀಗ ಸ್ಪೀಕರ್‌ ಅವರು ಆಹ್ವಾನಿತರ ಪಟ್ಟಿಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ತರಬೇತಿ ಶಿಬಿರಕ್ಕೆ ಆಹ್ವಾನ ನೀಡಿರುವ ಧಾರ್ಮಿಕ ಹಾಗೂ ಆಧ್ಯಾತ್ಮಕ ಗುರುಗಳು ಬಿಜೆಪಿ ಸಿದ್ಧಾಂತಕ್ಕೆ ಹತ್ತಿರವಾಗಿದ್ದವರು ಎನ್ನುವುದು ಪ್ರಗತಿಪರರ ಆಕ್ಷೇಪ. ಶಿಕ್ಷಣ ತಜ್ಞ ಗುರುರಾಜ್ ಕರ್ಜಗಿ ಅವರು ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ವಿರುದ್ಧವಾಗಿಯೇ ಮಾತನಾಡಿದ್ದರು. ಅವರನ್ನು ಆಹ್ವಾನಿಸಿದ್ದು ಸರಿಯಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

Join Whatsapp
Exit mobile version