ಸಾಮಾಜಿಕ ಕಾರ್ಯಕರ್ತ, ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನಿ ಸ್ವಾಮಿ ಪ್ರಭುತ್ವದ ಕೌರ್ಯಕ್ಕೆ ಬಲಿಯಾಗಿದ್ದಾರೆ. ಕಳೆದ 40 ವರ್ಷಗಳಿಂದ ಬುಡಕಟ್ಟು ಜನರ ಸೇವೆಯಲ್ಲಿ ನಿರತರಾಗಿದ್ದ ಬಡವರ ಈ ಸಂತನನ್ನು ಸರ್ಕಾರ ಕ್ರೂರವಾಗಿ ಬಲಿ ತೆಗೆದುಕೊಂಡಿದೆ. ಪ್ರಜಾತಂತ್ರದ ಧ್ವನಿ ಹತ್ತಿಕ್ಕುವ ಭರದಲ್ಲಿ ಸರ್ಕಾರ 84 ವರ್ಷದ ವೃದ್ಧ ಸ್ವಾಮಿಯವರಿಗೆ ಇನ್ನಿಲ್ಲದ ಕಾಟಕೊಟ್ಟು ಅವರನ್ನು ಹತ್ಯೆಗೈದಿದೆ. ಸೋಮವಾರ ಮುಂಬೈಯ ಆಸ್ಪತ್ರೆಯೊಂದರಲ್ಲಿ ಅವರು ನಿಧನರಾಗಿದ್ದಾರೆ. ಸ್ವಾಮಿ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್ಗೆ ಸ್ವಾಮಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಹೋಲಿ ಫ್ಯಾಮಿಲಿ ಆಸ್ಪತ್ರೆಯ ವೈದ್ಯರೊಬ್ಬರು ಈ ಮಾಹಿತಿ ನೀಡಿದ್ದಾರೆ. ವೆಂಟಿಲೇಟರ್ ನಲ್ಲಿದ್ದ ಸ್ವಾಮಿ ಅವರಿಗೆ ಸಮರ್ಪಕ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪ್ರಭುತ್ವದ ಕೌರ್ಯವನ್ನು ಪ್ರಶ್ನಿಸುವವರನ್ನು ಭಯೋತ್ಪಾದಕರು, ದೇಶದ್ರೋಹಿಗಳಂತೆ ಕಾಣುವ ಪ್ರಸ್ತುತ ಸಂದರ್ಭದಲ್ಲಿ ನ್ಯಾಯಾಂಗ ಕೂಡ ಕಣ್ಣಿದ್ದು ಕುರುಡುತನ ಪ್ರದರ್ಶಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಕಳೆದ ಎಂಟು ತಿಂಗಳಿಂದ ಜೈಲಿನ ಕತ್ತಲಲ್ಲಿ ಬದುಕುತ್ತಿದ್ದ ಸ್ವಾಮಿ ಅವರಿಗೆ ಕನಿಷ್ಠ ವೈದ್ಯಕೀಯ ಸೌಲಭ್ಯವನ್ನೂ ನಿರಾಕರಿಸಲಾಗಿತ್ತು. ಕೈಯಿಂದ ಲೋಟ ಎತ್ತಿ ನೀರು ಕುಡಿಯಲಾರದಷ್ಟು ಅವರು ನಿಶ್ಯಕ್ತಿ, ನರ ದೌರ್ಬಲ್ಯ ಹೊಂದಿದ್ದರು. ಸ್ಟ್ಟಾ ಮೂಲಕ ನೀರು ಕುಡಿಯಲು ಕೂಡ ಪೊಲೀಸರು ಅಡ್ಡಿ ಉಂಟು ಮಾಡಿದ್ದರು. ಕೊನೆಗೆ ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಆದರೆ ಮಾನವ ಹಕ್ಕುಗಳ ರಕ್ಷಣೆ ಮಾಡಬೇಕಾದ ನ್ಯಾಯಾಲಯ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಎರಡು ವಾರ ತೆಗೆದುಕೊಂಡಿರುವುದು ವ್ಯವಸ್ಥೆಯ ಕ್ರೂರ ಮುಖವನ್ನು ಅನಾವರಣಮಾಡಿದೆ.
ಜಾರ್ಖಂಡ್ ಸೇರಿದಂತೆ ಪೂರ್ವ ಭಾರತದಲ್ಲಿ ಬುಡಕಟ್ಟು ಜನರ ಹಕ್ಕುಗಳಿಗಾಗಿ ಸ್ಟ್ಯಾನಿ ಸ್ವಾಮಿ ಹೋರಾಟ ಆರಂಭಿಸಿದ ಬಳಿಕ ಅವರನ್ನು ಎಲ್ಲಾ ಸರ್ಕಾರಗಳು ಕರುಣಾಹೀನವಾಗಿ ನಡೆಸಿಕೊಂಡವು. ಖನಿಜ ಸಂಪತ್ತಿನ ಮೇಲೆ ಕಣ್ಣಿಣ್ಣು ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲು ಮುಂದಾದ ಸರ್ಕಾರಗಳ ವಿರುದ್ಧ ಧ್ವನಿ ಎತ್ತಿದ್ದೇ ಸ್ವಾಮಿ ಮಾಡಿದ ತಪ್ಪಾಗಿತ್ತು. ಜಾರ್ಖಂಡ್ ನ ನಾಲ್ಕು ಜಿಲ್ಲೆಗಳಲ್ಲಿ 2016ರಿಂದ ನಿರಂತರ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಹೋರಾಟ ನಡೆಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಸ್ವಾಮಿ ಅವರನ್ನು ಎದುರಾಳಿಯಂತೆ ಕಂಡು ಬೆನ್ನು ಬಿದ್ದವು. ಕೊನೆಗೆ ಕೋರೆಂಗಾವ್ ಪ್ರಕರಣದಲ್ಲಿ ಸಿಲುಕಿಸಿ ಇನ್ನಿಲ್ಲದಂತೆ ಮಾಡಲಾಗಿದೆ.
ಬಾಂಬ್ ಸ್ಫೋಟ, ಸಾಮೂಹಿಕ ನರಹತ್ಯೆ ಮುಂತಾದ ಹಿಂಸಾಕೃತ್ಯಗಳಲ್ಲಿ ತೊಡಗಿದವರಿಗೆ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯಸಭಾ, ಲೋಕಸಭಾ ಸ್ಥಾನಗಳನ್ನು ನೀಡಿ ಗೌರವಿಸುತ್ತಿದೆ. ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ ಸಂತನೊಬ್ಬನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಯುಎಪಿಎಯಂತಹ ಕಠಿಣ ಕಾನೂನುಗಳನ್ನು ಜಡಿದು ಅಲ್ಲಿಯೇ ಅವರು ಸಾಯುವಂತೆ ಮಾಡಿರುವುದು ಪ್ರಜಾತಂತ್ರದ ಮೇಲೆ ನಂಬಿಕೆ ಇಟ್ಟಿರುವ ದೇಶವೊಂದರಲ್ಲಿ ನಡೆದಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತ ತಲೆತಗ್ಗಿಸಬೇಕಾಗಿದ ಬಂದಿದೆ. ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ರಂತಹ ಆರೋಪಿಗಳಿಗೆ ಜಾಮೀನು ನೀಡುವ ನ್ಯಾಯಾಲಯ, 84 ವರ್ಷದ ವೃದ್ಧನಿಗೆ ಜಾಮೀನು ನೀಡಲು ನಿರಾಕರಿಸುತ್ತದೆ. ಸ್ವಾಮಿಯ ಸಾವು ಭಾರತೀಯ ನ್ಯಾಯ ವ್ಯವಸ್ಥೆ ನಿಜಕ್ಕೂ ಕುರುಡಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸ್ವಾಮಿ ಸಾವಿನಿಂದ ಜಾರ್ಖಂಡ್ ಮಾತ್ರವಲ್ಲ ಇಡೀ ಭಾರತದ ಆದಿವಾಸಿ, ಬುಡಕಟ್ಟು, ಬಡವರ ಧ್ವನಿಯೊಂದು ಅಡಗಿದಂತಾಗಿದೆ.