ಸಂಪನ್ಮೂಲಗಳ ರಕ್ಷಣೆಗೂ ನಾವೇ ಹೊಣೆ, ಸ್ಟ್ಯಾನ್ ಸ್ವಾಮಿ ಸಾವಿಗೂ…

Prasthutha: July 13, 2021
✍️ ನಾ. ದಿವಾಕರ

ವಿಶ್ವ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆಯುವ #ಆತ್ಮನಿರ್ಭರ ಭಾರತದ ಕನಸು ನನಸಾಗಬೇಕಾದರೆ ಭಾರತದ ಸಕಲ ನೈಸರ್ಗಿಕ ಸಂಪತ್ತು ಜಾಗತಿಕ ಬಂಡವಾಳದ ಗೋದಾಮು ಸೇರಬೇಕು. ಕಾರ್ಪೋರೇಟ್ ಜಗತ್ತಿಗೆ ಭಾರತದ ಸಂಪನ್ಮೂಲಗಳನ್ನು ಲೂಟಿ ಮಾಡಲು ಅನುಕೂಲ ಮಾಡಿಕೊಡಬೇಕೆಂದರೆ ಈ ನಿಸರ್ಗ ಸಂಪತ್ತಿನ ವಾರಸುದಾರರು, ಅಂದರೆ ಸಾರ್ವಭೌಮ ಪ್ರಜೆಗಳು, ಕೈ ಕಟ್ಟಿ ಕುಳಿತಿರಬೇಕು. ನೆಲ ನಮ್ಮದು, ಜಲ ನಮ್ಮದು, ಗಾಳಿ ನಮ್ಮದು ಎಂಬ ಈ ವಾರಸುದಾರರ ಧ್ವನಿ ಅಡಗಬೇಕು. ಮತಧರ್ಮ, ಜಾತಿ, ರಾಷ್ಟ್ರೀಯತೆ ಮತ್ತಿತರ ಯಾವುದೇ ಅಸ್ಮಿತೆಗಳು ಈ ಧ್ವನಿಯನ್ನು ಅಡಗಿಸಲು ಅಶಕ್ಯ ಎನಿಸಿದಾಗ ಪ್ರಭುತ್ವ ತನ್ನ ಸಾಂವಿಧಾನಿಕ ಹಕ್ಕುಗಳನ್ನು ವ್ಯವಸ್ಥಿತವಾಗಿ ಬಳಸುವ ಮೂಲಕ, ಹಾದಿ ತೆರವುಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲೇ ಎಲ್ಲವನ್ನೂ ಬುಡಮೇಲು ಮಾಡುವ ಒಂದು ಯಂತ್ರ ಜೆಸಿಬಿ ನವ ಭಾರತದ ರೂಪಕವಾಗಿಬಿಟ್ಟಿದೆ.


ಭೂಮಿ ಯಾರ ಸ್ವತ್ತು ? ಈ ಪ್ರಶ್ನೆ #ಆತ್ಮನಿರ್ಭರ ಭಾರತದ ಪ್ರತಿಯೊಬ್ಬ ಪ್ರಜೆಯನ್ನೂ ಕಾಡಬೇಕಿದೆ. 200 ವರ್ಷಗಳ ವಸಾಹತು ಆಳ್ವಿಕೆಯ ದಾಸ್ಯದಿಂದ ವಿಮೋಚನೆ ಹೊಂದಿದ್ದು ಕೇವಲ ಭೌಗೋಳಿಕ ಭಾರತವೋ ಅಥವಾ ಮಾನವ ಶ್ರಮವನ್ನೂ ಸೇರಿದಂತೆ ಸಕಲ ಸಂಪನ್ಮೂಲಗಳನ್ನೊಳಗೊಂಡ ಒಂದು ದೇಶವೋ ? ಏಳು ಶತಮಾನಗಳ ಪರ್ಷಿಯನ್ ಆಳ್ವಿಕೆಯಲ್ಲಿ ಭಾರತದ ಸಂಪತ್ತು ಲೂಟಿಯಾಗಲಿಲ್ಲ. ವಿಭಿನ್ನ ಸ್ವರೂಪಗಳಲ್ಲಿ ವೃದ್ಧಿಯಾಗಿತ್ತು. ಆದರೆ 200 ವರ್ಷಗಳ ವಸಾಹತು ಆಳ್ವಿಕೆ ಭಾರತವನ್ನು ಬರಿದು ಮಾಡಿತ್ತು. ಈ ಸಂಪತ್ತಿನ ಲೂಟಿಗೆ ಕಾರಣವಾದ ಗ್ರೇಟ್ ಬ್ರಿಟನ್ ಎಂಬ ಸಾಮ್ರಾಜ್ಯ ಲೂಟಿಯನ್ನು ನಿರ್ವಹಿಸಿದ ಒಂದು ಸಂಸ್ಥೆಯಷ್ಟೇ. ಭಾರತದ ಸಂಪತ್ತು ಪೋಷಿಸಿದ್ದು ಜಾಗತಿಕ ಬಂಡವಾಳಶಾಹಿ ಮಾರುಕಟ್ಟೆಯನ್ನು.


 ಈ ಅಪಾಯವನ್ನು ಅರಿತಿದ್ದೇ ವಿವೇಕಾನಂದರೂ ಸಹ ತಮ್ಮ ಮತಧರ್ಮ ಪ್ರಚಾರದ ನಡುವೆ ಸಮಾಜವಾದವನ್ನು ಪ್ರತಿಪಾದಿಸಿದ್ದರು. ಭಾರತ ಒಂದು ಸಮಾಜವಾದಿ ರಾಷ್ಟ್ರವಾಗಿ ರೂಪುಗೊಳ್ಳಬೇಕು ಎಂಬ ಆಶಯದೊಂದಿಗೇ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆಯ ಸಂದರ್ಭದಲ್ಲಿ ಭಾರತ ಬಲಿಷ್ಠವಾಗಬೇಕಾದರೆ ಸಮಾಜವಾದವೇ ಬುನಾದಿಯಾಗಬೇಕು ಎಂದು ಬಯಸಿ, ಸಾಂವಿಧಾನಿಕ ಸಮಾಜವಾದವನ್ನು ಪ್ರತಿಪಾದಿಸಿದ್ದರು. ಭೂಮಿ, ನೆಲ , ಜಲ ಮತ್ತು ನಿಸರ್ಗ ಸಂಪತ್ತಿಗೆ ಸಾರ್ವಭೌಮ ಭಾರತದ ಪ್ರಜೆಗಳೇ ಒಡೆಯರು ಎಂಬ ತಾತ್ವಿಕ ತಳಹದಿಯ ಮೇಲೆ ಭಾರತದ ಸಂವಿಧಾನ ರಚನೆಯಾಗಿತ್ತು. ಪ್ರಜೆಗಳ ಈ ಒಡೆತನವನ್ನು ನಿರ್ವಹಿಸುವ ಹೊಣೆ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಮೇಲಿತ್ತು. ಇಂದಿಗೂ ಭಾರತವನ್ನು ಇದೇ ಸಂವಿಧಾನ ಆಳುತ್ತಿದೆ. ಆದರೆ ಇದನ್ನು ಪ್ರತಿನಿಧಿಸುವ ಆಡಳಿತ ವ್ಯವಸ್ಥೆ ಬಂಡವಾಳಶಾಹಿ ಮಾರುಕಟ್ಟೆಗೆ ಶರಣಾಗಿದೆ.


 ತಮ್ಮ ಮೂಲ ನೆಲೆ ಮತ್ತು ಅಸ್ತಿತ್ವವನ್ನು ಸಂರಕ್ಷಿಸಿಕೊಳ್ಳಲು ಈ ದೇಶದ ಬುಡಕಟ್ಟು ಸಮುದಾಯಗಳು ಇಂದಿಗೂ ಹೋರಾಡಬೇಕಿದೆ. 1855ರಲ್ಲಿ ಜಮೀನ್ದಾರಿ ದಬ್ಬಾಳಿಕೆಯ ವಿರುದ್ಧ, ತಮ್ಮ ಭೂಮಿಯ ಹಕ್ಕುಗಳಿಗಾಗಿ ಹೋರಾಡಿದ ಸಂತಾಲ್ ಬುಡಕಟ್ಟು ಸಮುದಾಯ ಬ್ರಿಟಿಷರ ಕ್ರೂರ ದಬ್ಬಾಳಿಕೆಗೆ ಮಣಿದು ಇತಿಹಾಸದ ಒಂದು ಭಾಗವಾಗಿಹೋಯಿತು. ಈ ಬುಡಕಟ್ಟು ಸಮುದಾಯಗಳು ಅಂದು ಹೋರಾಡಿದ್ದು ತಮ್ಮ ಅರಣ್ಯ ಸಂಪತ್ತಿನ ರಕ್ಷಣೆಗಾಗಿ, ಭೂಮಿಯ ರಕ್ಷಣೆಗಾಗಿ ಮತ್ತು ಎಲ್ಲವನ್ನು ಕಬಳಿಸುವ ಬಂಡವಾಳಶಾಹಿಯ ಆಕ್ರಮಣದ ವಿರುದ್ಧ. 15 ಸಾವಿರ ಆದಿವಾಸಿಗಳು ಬಲಿಯಾಗಿದ್ದರು. ಇಂದು ನಾವು ಸಂತಾಲ್ ಹುತಾತ್ಮರ ಸ್ಮಾರಕದ ಸುತ್ತ ನಿಂತು ಇತಿಹಾಸವನ್ನು ಸ್ಮರಿಸುತ್ತಿದ್ದೇವೆ.
 ದುರಂತ ಎಂದರೆ 160 ವರ್ಷಗಳ ನಂತರ, ಇಂದಿಗೂ ಸಹ ಭಾರತದ ಆದಿವಾಸಿ ಸಮುದಾಯ, ಬುಡಕಟ್ಟು ಜನಾಂಗಗಳು ತಮ್ಮ ಅರಣ್ಯ ರಕ್ಷಿಸಿಕೊಳ್ಳಲು, ತಮ್ಮ ಭೂಮಿಯ ಹಕ್ಕಿಗಾಗಿ, ತಮ್ಮ ಜೀವಿಸುವ ಹಕ್ಕುಗಳಿಗಾಗಿ ಸ್ವತಂತ್ರ ಭಾರತದಲ್ಲಿ ಹೋರಾಡುತ್ತಲೇ ಇದ್ದಾರೆ. ಜಾರ್ಖಂಡ್, ಛತ್ತಿಸ್‍ಘಡ ಮತ್ತಿತರ ಪೂರ್ವ ಭಾರತದ ಆದಿವಾಸಿ ಸಮುದಾಯ ತಮ್ಮ ಜೀವನ ಮತ್ತು ಜೀವನೋಪಾಯದ ಹಕ್ಕುಗಳಿಗಾಗಿ ಸ್ವತಂತ್ರ ಭಾರತದ ಪ್ರಜಾಸತ್ತಾತ್ಮಕ ಪ್ರಭುತ್ವದ ವಿರುದ್ಧ ಹೋರಾಡುತ್ತಲೇ ಇರುವುದು ವಾಸ್ತವ. ಈ ಸಂಘರ್ಷ ಮೂಲತಃ ಸಂಪತ್ತನ್ನು ಕೊಳ್ಳೆ ಹೊಡೆಯುವ ಬಂಡವಾಳಶಾಹಿ ಮಾರುಕಟ್ಟೆ ಮತ್ತು ನಿಸರ್ಗದ ಮಕ್ಕಳ ನಡುವೆ ನಡೆಯುತ್ತಿದೆ. ಸ್ವತಂತ್ರ ಭಾರತದ ಪ್ರಜೆಗಳೂ ಸಹ ತಮ್ಮ ನದಿ ನೀರು, ಖನಿಜ ಸಂಪತ್ತು, ಅರಣ್ಯ ಭೂಮಿ ಮತ್ತು ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಹೋರಾಡುವುದು ಅನಿವಾರ್ಯವೂ ಆಗಿದೆ.


ಆದಿವಾಸಿಗಳ ಸಂಘರ್ಷದ ಸುತ್ತ
 ಇತ್ತೀಚಿನ ದಿನಗಳಲ್ಲಿ ಇಂತಹ ಒಂದು ಹೋರಾಟವನ್ನು ಜಾರ್ಖಂಡ್‍ನ 32 ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಪಾಥಲ್‍ಗರಿ ಆಂದೋಲನದಲ್ಲಿ ಗುರುತಿಸಬಹುದು. ತಮ್ಮ ಕುಟುಂಬಗಳು, ಗ್ರಾಮಗಳು ಮತ್ತು ಅಲ್ಲಿನ ನಿಸರ್ಗ ಸಂಪತ್ತಿನ ಮೇಲೆ ಆದಿವಾಸಿಗಳ ಹಕ್ಕು ಪ್ರತಿಪಾದಿಸುವ ನಿಟ್ಟಿನಲ್ಲಿ, ಜಾರ್ಖಂಡ್‍ನ ಆದಿವಾಸಿ ಸಮುದಾಯಗಳು ಅಲ್ಲಿನ ಸ್ಮಾರಕದ ಮೇಲೆ ಲೋಹದಿಂದ ಮಾಡಿದ ಫಲಕವೊಂದನ್ನು ಅಂಟಿಸಿ ತನ್ಮೂಲಕ ಹಕ್ಕು ಪ್ರತಿಪಾದನೆ ಮಾಡುತ್ತಾರೆ. ಬುಡಕಟ್ಟು ಸಂಪ್ರದಾಯದಿಂದ ಅನುಸರಿಸಲಾಗುವ ಪಾಥಲ್‍ಗರಿ ಎಂಬ ಪದವೂ ಹುಟ್ಟಿಕೊಂಡಿದೆ. ಈ ಫಲಕಗಳ ಮೂಲಕ ಇಲ್ಲಿನ ಗ್ರಾಮಸ್ಥರು ತಮ್ಮ ಹಳ್ಳಿಗಳ ಗಡಿ ಪ್ರದೇಶಗಳನ್ನು ನಿರ್ಧರಿಸುತ್ತಾರೆ. ಆದಿವಾಸಿಗಳ ಹೊರತಾಗಿ ಮತ್ತಾರಿಗೂ ಅಲ್ಲಿ ಭೂಮಿಯನ್ನು ಖರೀದಿಸುವ ಹಕ್ಕನ್ನು ನಿರಾಕರಿಸಲಾಗುತ್ತದೆ. ಪಂಚಾಯತ್ ನಿಯಮಗಳ (ಅನುಚ್ಚೇದಿತ ಪ್ರದೇಶಗಳಿಗೆ ವಿಸ್ತರಿಸಲಾದ) ಕಾಯ್ದೆ 1996 ಜಾರಿಯಾದ ನಂತರ ಐಎಎಸ್ ಅಧಿಕಾರಿ ಬಿ ಡಿ ಶರ್ಮ ಈ ರೀತಿಯ ಫಲಕಗಳನ್ನು ನೆಡುವ ಮೂಲಕ ಪಾಥಲ್‍ಗರಿ ಆಂದೋಲನಕ್ಕೆ ನಾಂದಿ ಹಾಡಿದ್ದರು.
 ಈ ಕಾಯ್ದೆಯನ್ವಯ 5ನೆಯ ಅನುಚ್ಚೇದಕ್ಕೆ ಒಳಪಡುವ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳಿಗೆ ಕೆಲವು ವಿಶೇಷ ಹಕ್ಕುಗಳನ್ನೂ ನೀಡಲಾಗಿದೆ. ಬುಡಕಟ್ಟುಗಳ ಸ್ವಾಯತ್ತತೆ, ಸಂಸ್ಕೃತಿ ಮತ್ತು ಆರ್ಥಿಕ ಸಬಲೀಕರಣವನ್ನು ಸಂರಕ್ಷಿಸಿ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಲವು ತೀರ್ಪುಗಳೂ ಸಹ ಪೇಸಾ ಕಾಯ್ದೆಯ ನಿಯಮಗಳನ್ನು ಸಮರ್ಥಿಸಿವೆ. ಈ ಹಿನ್ನೆಲೆಯಲ್ಲೇ ಇಲ್ಲಿನ ಸಾಂಪ್ರದಾಯಿಕ ಗ್ರಾಮಸಭೆಯ ಆಡಳಿತ ವ್ಯವಸ್ಥೆ, ಭೂಮಿಯ ಮೇಲಿನ ಆದಿವಾಸಿಗಳ ಹಕ್ಕು ರಕ್ಷಣೆ,  ಆದಿವಾಸಿಗಳನ್ನು   ಹೊರತುಪಡಿಸಿ ಇತರರಿಗೆ ಮತ್ತು ಹೊರಗಿನವರಿಗೆ ಈ ಪ್ರದೇಶದಲ್ಲಿ ನೆಲೆಸಲು ನಿರ್ಬಂಧಿತ ಅವಕಾಶಗಳನ್ನು ನೀಡುವುದು ಇವೇ ಮುಂತಾದ ನಿಯಮಗಳಿಗೆ ಒತ್ತಾಯಿಸಿತ್ತು. ಪೇಸಾ ಕಾಯ್ದೆಯಡಿ ಈ ನಿಯಮಗಳು ಕಾನೂನುಬದ್ಧವಾಗಿವೆ ಎಂದೂ ಸುಪ್ರೀಂಕೋರ್ಟ್‍ನ ಸಮತಾ ತೀರ್ಪಿನಲ್ಲಿ ಹೇಳಲಾಗಿದೆ. ಜಾರ್ಖಂಡ್‍ನ ಒಟ್ಟು ಜನಸಂಖ್ಯೆಯಲ್ಲಿ ಬುಡಕಟ್ಟುಗಳು ನಾಲ್ಕನೆ ಒಂದು ಭಾಗದಷ್ಟಿದ್ದು, ಹಲವಾರು ಜಿಲ್ಲೆಗಳಲ್ಲಿ ಆದಿವಾಸಿಗಳ ಜನಸಂಖ್ಯೆ ಅಧಿಕವಾಗಿದೆ. ರಾಜ್ಯ ಸರ್ಕಾರ ಪೇಸಾ ಕಾಯ್ದೆಯ 5ನೆಯ ಅನುಚ್ಚೇದದದ ನಿಯಮಗಳನ್ನು ಜಾರಿಗೊಳಿಸದಿದ್ದುದರಿಂದ ಇಲ್ಲಿನ ಆದಿವಾಸಿಗಳು ತಮ್ಮದೇ ಸಂಘಟನೆಯೊಂದಿಗೆ ಭೂಮಿ ಮತ್ತು ಸಂಪನ್ಮೂಲಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.
 ಈ ಪಾಥಲ್‍ಗರಿ ಆಂದೋಲನದ ಹಿನ್ನೆಲೆಯಲ್ಲೇ ಜಾರ್ಖಂಡ್ ಸರ್ಕಾರವು ನಾಲ್ಕು ಸಾವಿರಕ್ಕೂ ಹೆಚ್ಚು ಆದಿವಾಸಿಗಳನ್ನು ಮಾವೋವಾದಿಗಳೊಡನೆ ಸಂಪರ್ಕವಿರುವ ಆರೋಪದ ಮೇಲೆ ಬಂಧಿಸಿತ್ತು. ಈ ಬಂಧಿತರ ಪರವಾಗಿ ಸ್ಟ್ಯಾನ್ ಸ್ವಾಮಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದರು. 2019ರಲ್ಲಿ ಅಧಿಕಾರಕ್ಕೆ ಬಂದ ಹೇಮಂತ್ ಸೊರೇನ್ ಸರ್ಕಾರ ಈ ಬಂಧಿತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದಿದ್ದರೂ, ಬಂಧಿತರ ಬಿಡುಗಡೆಗಾಗಿ ಆದೇಶ ಹೊರಡಿಸಲಿಲ್ಲ. ಸ್ಟ್ಯಾನ್ ಸ್ವಾಮಿಯವರ ಹೋರಾಟ ಮುಂದುವರೆದಿತ್ತು. ಫಾದರ್ ಸ್ವಾಮಿ ಅವರು ಆಳುವ ವರ್ಗಗಳ ಕೆಂಗಣ್ಣಿಗೆ ಗುರಿಯಾಗಿದ್ದು ಮೂಲತಃ ಈ ಕಾರಣಗಳಿಗಾಗಿ. ಭೀಮಾಕೊರೆಗಾಂವ್ ಒಂದು ನಿಮಿತ್ತ ಮಾತ್ರವಾಗಿತ್ತು.
 ಸಂಪನ್ಮೂಲ ರಕ್ಷಣೆಗಾಗಿ ಸಂಘರ್ಷ;
 ಸ್ವತಂತ್ರ ಭಾರತದಲ್ಲಿ ದೇಶದ ಸಂಪತ್ತಿನ ವೃದ್ಧಿಗೆ ಹಗಲಿರುಳು ಶ್ರಮಿಸುವ ಶ್ರಮಿಕ ವರ್ಗಗಳು ಮತ್ತು ಈ ವರ್ಗಗಳು ನಂಬಿ ಬದುಕುವ ನೈಸರ್ಗಿಕ ಸಂಪನ್ಮೂಲಗಳು, ಶ್ರಮದ ಹಾದಿಗಳು ಸದಾ ಸಂಘರ್ಷದ ಹಾದಿಯಲ್ಲೇ ರಕ್ಷಣೆಗೊಳಗಾಗುತ್ತಿರುವುದನ್ನು ಗಮನಿಸಬಹುದು. ಸಕಲ ಸಂಪತ್ತಿನ ಸಂರಕ್ಷಕರಾದ ಶ್ರಮಿಕರ ಮೂಲಭೂತ ಹಕ್ಕುಗಳಿಗಾಗಿ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಉಗ್ರ ಹೋರಾಟಗಳೂ ನಡೆದಿವೆ. ಭೂಗರ್ಭದಲ್ಲಿನ ಅಮೂಲ್ಯ ಖನಿಜ ಸಂಪತ್ತನ್ನು ಲೂಟಿ ಮಾಡಲು ತುದಿಗಾಲಲ್ಲಿ ನಿಂತಿರುವ ಕಾರ್ಪೋರೇಟ್ ಬಂಡವಾಳಿಗರು ಈ ಶ್ರಮಿಕರು ಸಂಘಟಿತರಾಗುವುದನ್ನೇ ಮಹಾಪರಾಧ ಎನ್ನುವಂತೆ ಬಿಂಬಿಸುತ್ತಿರುವುದನ್ನೂ ನೋಡುತ್ತಲೇ ಇದ್ದೇವೆ. ಮೂರು ದಶಕಗಳ ಹಿಂದೆಯೇ ಛತ್ತಿಸ್‍ಘಡದ ದಹಲ್ಲಿ ರಾಜಾ ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಸಂಘಟಿಸಿ, ಬಂಡವಾಳಶಾಹಿಗಳ ದಬ್ಬಾಳಿಕೆಯಿಂದ ಗಣಿ ಕಾರ್ಮಿಕರ ಮತ್ತು ಆದಿವಾಸಿಗಳ ವಿಮೋಚನೆಗಾಗಿ ಹೋರಾಡಿದ ಶಂಕರ್ ಗುಹಾ ನಿಯೋಗಿ ಮಾಫಿಯಾಗಳ ಗುಂಡೇಟಿಗೆ ಬಲಿಯಾಗಿ 30 ವರ್ಷಗಳೇ ಕಳೆದಿವೆ.
 ಈ ಪರಂಪರೆಗೆ ನಾಂದಿ ಹಾಡಿದ್ದೂ ನವ ಉದಾರವಾದ ಭಾರತವನ್ನು ಆವರಿಸಿದ 1980-90ರ ದಶಕದಲ್ಲೇ ಎನ್ನುವುದನ್ನು ಗಮನಿಸಬೇಕಿದೆ. ನೆಲ, ಜಲ, ಅರಣ್ಯ, ಬೆಟ್ಟಗುಡ್ಡ ಮತ್ತು ಪರಿಸರ ಇವುಗಳ ರಕ್ಷಣೆಗಾಗಿ ಹೋರಾಡುವ ಎಲ್ಲ ಗುಂಪುಗಳೂ, ಸಂಘಟನೆಗಳೂ, ವ್ಯಕ್ತಿಗಳೂ ಬಂಡವಾಳಶಾಹಿಗಳ, ಕಾರ್ಪೋರೇಟ್ ಉದ್ಯಮಗಳ ಪ್ರಥಮ ಶತ್ರುಗಳಾಗುತ್ತಾರೆ.  ಈ ಔದ್ಯಮಿಕ ಹಿತಾಸಕ್ತಿಗಳನ್ನೇ ಅವಲಂಬಿಸಿ ದೇಶದ ಪ್ರಗತಿ ಸಾಧಿಸಲು ಹೊರಟಿರುವ ಸ್ವತಂತ್ರ ಭಾರತದ ಚುನಾಯಿತ ಸರ್ಕಾರಗಳು ಇಂತಹ ಕೊಲೆಗಳನ್ನೂ ಸದ್ದಿಲ್ಲದಂತೆ ಸಹಿಸಿಕೊಂಡುಬಿಡುತ್ತವೆ. ರಾಜಕೀಯ ಪೀಠಗಳು, ಅಧಿಕಾರಶಾಹಿ ಮತ್ತು ಕಾನೂನು ವ್ಯವಸ್ಥೆಯ ಜಂಟಿ ಕಾರ್ಯಾಚರಣೆಯಲ್ಲಿ ಸಂಪನ್ಮೂಲಗಳಿಗೆ ಹೋರಾಡುವ ಶಕ್ತಿಗಳೆಲ್ಲವೂ ದೇಶದ್ರೋಹಿ ಎನಿಸಿಬಿಡುತ್ತವೆ.
 ಹಾಗಾಗಿಯೇ. ಸಾವಿರಾರು ಗ್ರಾಮಗಳನ್ನು ಮುಳುಗಡೆ ಮಾಡುವ ಅಣೆಕಟ್ಟುಗಳ ವಿರುದ್ಧ, ಮುಂದಿನ ಹಲವು ಪೀಳಿಗೆಗಳ ಬದುಕನ್ನು ನರಕಸದೃಶಗೊಳಿಸಬಹುದಾದ ಅಣುವಿದ್ಯುತ್ ಘಟಕಗಳ ವಿರುದ್ಧ, ಉಷ್ಣವಿದ್ಯುತ್ ಸ್ಥಾವರದ ವಿರುದ್ಧ, ಹಾರುಬೂದಿಯ ವಿರುದ್ಧ, ಅರಣ್ಯಗಳನ್ನು ಮರುಭೂಮಿ ಮಾಡುವ ಗಣಿಗಾರಿಕೆಯ ವಿರುದ್ಧ, ಬೆಟ್ಟಗಳನ್ನೇ ಕರಗಿಸುವ ಕಲ್ಲುಗಣಿಗಾರಿಕೆಯ ವಿರುದ್ಧ ಜನಸಮುದಾಯಗಳು ನಡೆಸುವ ಹೋರಾಟಗಳು ನವ ಭಾರತದಲ್ಲಿ ವಿದ್ರೋಹದಂತೆ ಕಾಣುತ್ತವೆ. ತೂತ್ತುಕುಡಿ ಅಣುವಿದ್ಯುತ್ ಘಟಕದ ವಿರುದ್ಧ ನಡೆದ ಹೋರಾಟದಲ್ಲಿ ಹಲವರನ್ನು ರಾಜದ್ರೋಹದ ಕಾಯ್ದೆಯಡಿ ಬಂಧಿಸಲಾಗಿದೆ. ಭವಿಷ್ಯದ ಪೀಳಿಗೆಗೆ ನಮ್ಮ ದೇಶದ ಅಮೂಲ್ಯ ಸಂಪತ್ತು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಬೇಕು ಎಂಬ ಸದುದ್ದೇಶದಿಂದ ಹೋರಾಡುವವರು. “ ಅಭಿವೃದ್ಧಿ ವಿರೋಧಿ”ಗಳಾಗಿ ಕಾಣುತ್ತಾರೆ. ಕಾರ್ಪೋರೇಟ್ ಲೂಟಿಕೋರರಿಗೆ ಒತ್ತಾಸೆಯಾಗುವ ಪಟ್ಟಭದ್ರ ಔದ್ಯಮಿಕ ಹಿತಾಸಕ್ತಿಗಳು ಶಾಸನ ಸಭೆಗಳನ್ನು ಅಲಂಕರಿಸುತ್ತವೆ. ಸಂಪನ್ಮೂಲ ರಕ್ಷಣೆಗಾಗಿ ಹೋರಾಡುವವರು ವರ್ಷಗಟ್ಟಲೆ ಕಾರಾಗೃಹ ವಾಸಿಗಳಾಗುತ್ತಾರೆ.
 ಗಂಗೆ ಎಂದರೆ ಮೈ ಪುಳಕಗೊಂಡು ನಮಿಸುವ ಭಾರತದ ಬಹುಪಾಲು ನಾಗರಿಕರಿಗೆ ಗಂಗಾನದಿ ಮಲಿನಗೊಳ್ಳದಂತೆ ಕಾಪಾಡಲು ಹೋರಾಡಿ ಪ್ರಾಣ ತೆತ್ತ ಮಹನೀಯರ ಪರಿಚಯವೂ ಇಲ್ಲದಿರುವುದು ದುರಂತ. 2018ರ ಅಕ್ಟೋಬರ್ 24ರಿಂದ ಗಂಗಾನದಿಯ ರಕ್ಷಣೆಗಾಗಿ ಆಮರಣಾಂತ ಉಪವಾಸ ಕೈಗೊಂಡಿದ್ದ 27 ವರ್ಷದ ಸ್ವಾಮಿ ಆತ್ಮಬೋಧಾನಂದ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಎಲ್ಲ ಪತ್ರಗಳೂ ಕಸದ ಬುಟ್ಟಿ ಸೇರಿದ್ದವು. 180 ದಿನಗಳ ಉಪವಾಸದ ನಂತರ ಸಂತರು ಕೊನೆಯುಸಿರೆಳೆದಿದ್ದರು. ಅಲಕಾನಂದ, ಧೌಲಿಗಂಗಾ, ಮಂದಾಕಿನಿ ಮತ್ತು ಪಿಂಡಾರ್ ನದಿಗೆ ಅಡ್ಡಲಾಗಿ ಜಲವಿದ್ಯುತ್ ಘಟಕಗಳ ಸ್ಥಾಪನೆಯ ವಿರುದ್ಧ ನಿರಂತರವಾಗಿ ಹೋರಾಡಿದ 86 ವರ್ಷದ ಸ್ವಾಮಿ ಗ್ಯಾನ್ ಸ್ವರೂಪ್ ಸಾನಂದ್ ಅಲಿಯಾಸ್ ಜಿ ಡಿ ಅಗರ್ವಾಲ್ 111 ದಿನಗಳ ಉಪವಾಸದ ನಂತರ 2018ರ ಅಕ್ಟೋಬರ್‍ನಲ್ಲಿ ತಮ್ಮ ಯಾತ್ರೆ ಮುಗಿಸಿದ್ದರು.
 ಅಗರ್ವಾಲ್ ನಂತರ ಗಂಗಾನದಿಯ ರಕ್ಷಣೆಗಾಗಿ ಹೋರಾಟ ಮುಂದುವರೆಸಿದ  40 ವರ್ಷದ ಕಾರ್ಯಕರ್ತ ಗೋಪಾಲ್ ದಾಸ್ 2018ರ ಜೂನ್ 24ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇವರತ್ತ ತಿರುಗಿಯೂ ನೋಡದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2018ರ ಡಿಸೆಂಬರ್ 6ರಂದು ಈ ಹೋರಾಟಗಾರ ಹಠಾತ್ತನೆ ಕಾಣೆಯಾದ ಮೇಲೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಶೋಧಿಸುವ ಪ್ರಯತ್ನವನ್ನೂ ಮಾಡಲಿಲ್ಲ. ಗೋಪಾಲ್ ದಾಸ್ ಹತ್ಯೆಯಾಗಿರುವ ಸಾಧ್ಯತೆಗಳೇ ಹೆಚ್ಚು . ಇದಕ್ಕೂ ಮುನ್ನ 2014ರಲ್ಲೇ ಬಾಬಾ ನಾಗನಾಥ್ ಯೋಗೇಶ್ವರ್ ವಾರಣಾಸಿಯಲ್ಲೇ ಮೂರು ತಿಂಗಳ ಉಪವಾಸ ಸತ್ಯಾಗ್ರಹ ಮಾಡಿ ಗಂಗೆಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ್ದರು. ಮತ್ತೋರ್ವ ಸಂತ ಸ್ವಾಮಿ ನಿಗಮಾನಂದ್ ಡೆಹ್ರಾಡೂನ್‍ನಲ್ಲಿ ತಮ್ಮ ಸತ್ಯಾಗ್ರಹ ಮುಂದುವರೆಸಿದ್ದರು. ಇವರ ಯಾವುದೇ ಬೇಡಿಕೆಗಳನ್ನು ಆಲಿಸುವ ವ್ಯವಧಾನವೂ ಸರ್ಕಾರಕ್ಕೆ ಇರಲಿಲ್ಲ. ನಿಗಮಾನಂದ್ ಸಹ ಸತ್ಯಾಗ್ರಹಿಯಾಗಿಯೇ ನಿರ್ಗಮಿಸಿದ್ದರು. ವಿಶೇಷ ಎಂದರೆ ಗಂಗಾನದಿಯ ಸ್ವಚ್ಚತೆಗಾಗಿ, ‘ಪವಿತ್ರ ಗಂಗೆ’ಯ ಮಾಲಿನ್ಯದ ವಿರುದ್ಧ ಹೋರಾಡಿ, ಕೇಳುವವರಿಲ್ಲದೆ ಪ್ರಾಣತೆತ್ತ ಇವರಾರೂ ಮಾವೋವಾದಿಗಳಾಗಿರಲಿಲ್ಲ. ಗಂಗೆಯಲ್ಲಿ ಹೆಣಗಳು ಇಂದಿಗೂ ತೇಲುತ್ತಲೇ ಇವೆ.
 
ಇಂತಹ ನಿದರ್ಶನಗಳು ಸ್ವತಂತ್ರ ಭಾರತದ ಇತಿಹಾಸದಲ್ಲಿ ಹೇರಳವಾಗಿವೆ. ಭೂಪಾಲ್ ಅನಿಲ ದುರಂತ, ಇತ್ತೀಚಿನ ವಿಶಾಖಪಟ್ಟಣಂ ವಿಷಾನಿಲ ದುರಂತ, ಛತ್ತಿಸ್‍ಘಡದ ಗಣಿಗಳಲ್ಲಿ ಇಂದಿಗೂ ನಡೆಯುತ್ತಲೇ ಇರುವ ಅವಘಡಗಳು, ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ನಡೆದ ಘಟನೆ ಹೀಗೆ ಶ್ರಮಜೀವಿಗಳ ಬದುಕನ್ನು ನಿರ್ನಾಮ ಮಾಡಿದ ಪರಿಸರ ನಾಶಕ ಘಟನೆಗಳು ಸಾಕಷ್ಟು ನಮ್ಮ ಕಣ್ಣಮುಂದಿವೆ. ಇವೆಲ್ಲವೂ “ ಅಭಿವೃದ್ಧಿ ” ಮತ್ತು “ ದೇಶದ ಪ್ರಗತಿ ”ಯ ಹೆಸರಿನಲ್ಲಿ ನಡೆಯುತ್ತಲೇ ಇರುವ ಮಾರಣಹೋಮಗಳು. ಇಂತಹ ವಿನಾಶಕಾರಿ ಉದ್ಯಮಗಳ ವಿರುದ್ಧ ಹೋರಾಡುವವರು  ‘ದೇಶದ್ರೋಹಿಗಳಾಗಿ’ ಕಾಣುತ್ತಾರೆ. ಕಾನೂನು ಕ್ರಮ ಕೈಗೊಳ್ಳಲು ಸುಲಭವಾಗುವುದೆಂಬ ಕಾರಣಕ್ಕೆ ಈ ಪರಿಸರ ರಕ್ಷಕರನ್ನು ಮತ್ತು ಇವರ ಬೆನ್ನೆಲುಬಾಗಿ ನಿಂತಿರುವ ಜನಸಮುದಾಯಗಳನ್ನು ಮಾವೋವಾದಿಗಳೆಂದು ವರ್ಗೀಕರಿಸಲಾಗುತ್ತದೆ. ಸ್ಟ್ಯಾನ್ ಸ್ವಾಮಿ ಈ ದುರಂತ ಚರಿತ್ರೆಯ ಒಂದು ಸಂಕೇತವಾಗಿ ಕಾಣುತ್ತಾರೆ.
 ನವ ಉದಾರವಾದದ ಆರ್ಥಿಕ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ನಿಸರ್ಗ ಸಂಪತ್ತಿನ ಮೇಲೆ ಕೇವಲ ಮಾರುಕಟ್ಟೆಯ ಒಡೆತನ ಮಾತ್ರವೇ ಇರುತ್ತದೆ. ಕಾರ್ಪೋರೇಟ್ ಔದ್ಯಮಿಕ ಜಗತ್ತಿನ ಆಧಿಪತ್ಯದ ಮೂಲಕವೇ ಭಾರತದ ಪ್ರಗತಿಯನ್ನು ಕಾಣುವ ಆಳುವ ವರ್ಗಗಳ ಹಂಬಲ, ಬಂಡವಾಳಶಾಹಿ ವ್ಯವಸ್ಥೆಯ ಮೂಲಕ ಇಂದು ತಾರ್ಕಿಕ ಅಂತ್ಯ ತಲುಪಿದೆ. ಭಾರತದ ಸಾರ್ವಭೌಮ ಪ್ರಜೆಗಳು ನಿಸರ್ಗ ಸಂಪತ್ತಿನ ಮೇಲಿನ ತಮ್ಮ ಒಡೆತನವನ್ನು ಕಳೆದುಕೊಂಡಿರುವುದೇ ಅಲ್ಲದೆ, ಬಂಡವಾಳಶಾಹಿಗಳ ಆಮಿಷಗಳಿಗೆ ಬಲಿಯಾಗಿ ಬರಿದಾಗುತ್ತಿರುವ ನಿಸರ್ಗದ ಒಡಲಲ್ಲಿ ಬೇಯುತ್ತಿದ್ದಾರೆ. ನಗರೀಕರಣದ ಹಿತವಲಯದಿಂದ ಹೊರಗಿರುವ ಆದಿವಾಸಿ ಸಮುದಾಯಗಳಿಗೆ, ಗ್ರಾಮೀಣ ಜನತೆಗೆ ತಮ್ಮ ಭೂಮಿಯ ಹಕ್ಕು, ಜೀವಿಸುವ ಹಕ್ಕು ಉಳಿಸಿಕೊಳ್ಳಲು ಹೋರಾಡುವುದು ಅನಿವಾರ್ಯವಾಗಿದೆ.
 ಈ ಹೋರಾಟಗಳು ನಿಯಂತ್ರಣ ಮೀರಿದಾಗ ‘ ಮಾವೋವಾದಿ ’ಗಳು ಸೃಷ್ಟಿಯಾಗುತ್ತಾರೆ. ಏಕೆಂದರೆ ದೇಶದ ಪ್ರಜ್ಞಾವಂತ , ಸುಶಿಕ್ಷಿತ ಮಧ್ಯಮ ವರ್ಗಗಳ ದೃಷ್ಟಿಯಲ್ಲಿ ಮಾವೋವಾದಿಗಳು ಸದಾ ದಂಡನಾರ್ಹವೇ ಆಗಿರುತ್ತಾರೆ. ಎನ್ ಕೌಂಟರ್ ಬಲಿಯಾಗಬೇಕಾದ ಜೀವಿಗಳೇ ಆಗಿರುತ್ತಾರೆ. ಸಮೂಹ ಸನ್ನಿಗೊಳಗಾಗಿರುವ ಈ ಬೃಹತ್ ಜನಸಂಖ್ಯೆಯ ನಿರ್ಲಿಪ್ತತೆ ಮತ್ತು ನಿಷ್ಕ್ರಿಯತೆಯ ಫಲವನ್ನು ಸ್ಟ್ಯಾನ್ ಸ್ವಾಮಿ ಮುಂತಾದವರ ಸಾವಿನಲ್ಲಿ ನಾವು ಕಾಣಬಹುದಾಗಿದೆ. ಶಂಕರ್ ಗುಹಾ ನಿಯೋಗಿ, ಸಫ್ದಾರ್ ಹಷ್ಮಿ ಮುಂತಾದವರ ಸಾವಿನಿಂದಲೇ ಈ ದೇಶದ ಸಾರ್ವಜನಿಕ ಪ್ರಜ್ಞೆ ಜಾಗೃತಗೊಂಡಿದ್ದರೆ ಬಹುಶಃ ಸ್ಟ್ಯಾನ್ ಸ್ವಾಮಿಯಂಥವರು  ಬದುಕುಳಿಯಬಹುದಿತ್ತು. ನಾವು, ಅಂದರೆ, ಈ ದೇಶದ ಸುಶಿಕ್ಷಿತ ಪ್ರಜ್ಞಾವಂತ ಜನತೆ ನಮ್ಮ ಸ್ವಪ್ರಜ್ಞೆಯನ್ನೂ ಕಳೆದುಕೊಂಡಿದ್ದೇವೆ, ಸಾಂವಿಧಾನಿಕ ಪ್ರಜ್ಞೆಯನ್ನೂ ಮರೆತಿದ್ದೇವೆ. ಒಂದು ಇಡೀ ಪೀಳಿಗೆ ನವ ಉದಾರವಾದದ ಸಮೂಹ ಸನ್ನಿಗೊಳಗಾಗಿರುವ ಈ ಸಂದರ್ಭದಲ್ಲಿ ಈ ಪ್ರಜ್ಞೆಯನ್ನು ಬಡಿದೆಬ್ಬಿಸುವುದು ನಮ್ಮ ಆದ್ಯತೆಯಾಗಬೇಕಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ