ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡವನ್ನು ಸಹಿಸಿಕೊಳ್ಳಲಾಗದೆ ಹಿರಿಯ ಮುಖಂಡರಾದ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಮೃತಪಟ್ಟರು ಎಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ನೀಡಿದ್ದ ವಿವಾದಾತ್ಮಕ ಹೇಳಿಕೆ ನಂತರ ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರ ಕಣ ಮತ್ತೊಮ್ಮೆ ರಂಗೇರಿದೆ.
ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಗ್ಗೆ ಡಿಎಂಕೆ ಮತ್ತೋರ್ವ ಮುಖಂಡ ಎ. ರಾಜಾ ಅವಹೇಳನಕಾರಿ ಹೇಳಿಕೆ ನೀಡಿದ್ದ ಬೆನ್ನಲ್ಲೇ, ಇದೀಗ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಯಿಂದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಟಾಲಿನ್ ಪುತ್ರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.
ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರ ಮಕ್ಕಳು ಉದಯನಿಧಿ ಸ್ಟಾಲಿನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
” ಉದಯನಿಧಿ ಸ್ಟಾಲಿನ್, ದಯವಿಟ್ಟು, ನಿಮ್ಮ ಚುನಾವಣಾ ಪ್ರಚಾರದಲ್ಲಿ ನನ್ನ ತಾಯಿಯ ನೆನಪನ್ನು ಬಳಸಬೇಡಿ. ನಿಮ್ಮ ಹೇಳಿಕೆ ತಪ್ಪು. ಪ್ರಧಾನಿ ಮೋದಿ ಯಾವಾಗಲೂ ನನ್ನ ತಾಯಿಗೆ ಗೌರವ ನೀಡುತ್ತಿದ್ದರು. ನಿಮ್ಮ ಹೇಳಿಕೆ ನೋವುಂಟು ಮಾಡಿದೆ” ಎಂದು ಬನ್ಸೂರಿ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
”ಚುನಾವಣಾ ಒತ್ತಡವಿದೆ ಎಂಬುದು ನನಗೆ ತಿಳಿದಿದೆ. ಆದರೆ, ನೀವು ಸುಳ್ಳು ಹೇಳಿದಾಗ ಮತ್ತು ನನ್ನ ತಂದೆಯ ಸ್ಮರಣೆಯನ್ನು ಅಗೌರವಿಸಿದಾಗ ನಾನು ಮೌನವಾಗಿರುವುದಿಲ್ಲ. ಅಪ್ಪ ಮತ್ತು ನರೇಂದ್ರ ಮೋದಿ ಅವರ ನಡುವೆ ರಾಜಕೀಯಕ್ಕೆ ಮೀರಿದ ವಿಶೇಷ ಬಾಂಧವ್ಯವಿತ್ತು. ಅಂತಹ ಸ್ನೇಹತ್ವವನ್ನು ಸಾಕಷ್ಟು ತಿಳಿದುಕೊಳ್ಳಳು ನೀವು ಅದೃಷ್ಟವಂತಾರಾಗಲಿ ಎಂದು ಪ್ರಾರ್ಥಿಸುವುದಾಗಿ ಸೋನಾಲಿ ಜೇಟ್ಲಿ ಬಕ್ಷಿ ಹೇಳಿದ್ದಾರೆ.
ಈ ಸಂಬಂಧ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿನ ಬಿಜೆಪಿ ನಿಯೋಗ ದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ, ದೂರು ದೂಖಲಿಸಿದ್ದು, ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಉದಯನಿಧಿ ಸ್ಟಾಲಿನ್ ಅವರನ್ನು ಪ್ರಚಾರದಿಂದ ನಿಷೇಧಿಸುವಂತೆ ತಮಿಳುನಾಡು ಬಿಜೆಪಿ ಘಟಕ ಆಗ್ರಹಿಸಿದೆ.