ವಿಟ್ಲ: ಯುವಕನಿಗೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು

Prasthutha|

ದಕ್ಷಿಣ ಕನ್ನಡ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನಿಗೆ ನಾಲ್ವರ ತಂಡ ಹಲ್ಲೆ ನಡೆಸಿ, ಚೂರಿಯಿಂದ ಇರಿದು ಪರಾರಿಯಾದ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಸಂಭವಿಸಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಕೊಳ್ನಾಡು ಗ್ರಾಮದ ಕಾಡುಮಠ ನಿವಾಸಿ ಅಬ್ದುಲ್ ಹಾರಿಸ್ (29) ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವಿಟ್ಲ ಸಮುದಾಯ ಕಾಡುಮಠ ನಿವಾಸಿಗಳಾದ ಅವಿನಾಶ್, ವಿನೀತ್, ದಿನೇಶ್, ಮತ್ತೊಬ್ಬ ಅಪರಿಚಿತ ವ್ಯಕ್ತಿ ವಿರುದ್ಧ ಹಾರೀಸ್ ದೂರು ನೀಡಿದ್ದಾರೆ.

ಅಬ್ದುಲ್ ಹಾರಿಸ್ ಅವರು ಸಾಲೆತ್ತೂರಿನಿಂದ ತನ್ನ ಮನೆಗೆ ಬೈಕ್ ಅಲ್ಲಿ ಬರುತ್ತಿದ್ದಾಗ ಹಿಂದಿನಿಂದ ಬಂದ ಅವಿನಾಶ್, ವಿನೀತ್, ದಿನೇಶ್ ಮತ್ತು ಮತ್ತೊಬ್ಬ ಅಪರಿಚಿತ ವ್ಯಕ್ತಿ ಸೇರಿಕೊಂಡು ಹಾರಿಸ್ ಅವರ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕೈಯಿಂದ ಹೊಡೆದು, ಬೈಕಿನಿಂದ ದೂಡಿಹಾಕಿದ್ದು, ಬಳಿಕ ಅವಿನಾಶ್ ಎಂಬಾತ ಚೂರಿಯಿಂದ ಹಾರಿಸ್ ಅವರ ಬೆನ್ನಿಗೆ ಇರಿದಿದ್ದಾನೆನ್ನಲಾಗಿದೆ. ಬಳಿಕ “ನೀನು ನಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ತೆರಳಿದ್ದಾರೆ.

- Advertisement -

ಕೆಲ ಸಮಯದ ಹಿಂದೆ ಅವಿನಾಶ್ ಎಂಬಾತನ ತಂಗಿಗೆ ಕೀಟಲೆ ಮಾಡಿದ್ದಾನೆ ಎಂದು ಹಾರಿಸ್ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪೂರ್ವ ದ್ವೇಷದಿಂದ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp