ಬೆಂಗಳೂರು: ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿರುದ್ಧ ಭಜರಂಗ ಸೇನೆ ಹೈಕೋರ್ಟಿಗೆ ಪಿಐಎಲ್ ಸಲ್ಲಿಸಿದೆ.
‘ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಧ್ವಂಸಗೊಳಿಸಿ ಜಾಮಿಯಾ ಮಸೀದಿ ನಿರ್ಮಾಣ ಮಾಡಲಾಗಿದೆ’ ಎಂದು ಭಜರಂಗ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಿ. ಮಂಜುನಾಥ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಅರ್ಜಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ, ರಾಜ್ಯ ಧಾರ್ಮಿಕ ಪರಿಷತ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
‘ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯ, ಮೈಸೂರು ಸಾಮ್ರಾಜ್ಯ ಹಾಗೂ ದಳವಾಯಿ ದೊಡ್ಡಯ್ಯ ಸೇರಿದಂತೆ ಅನೇಕ ಆಡಳಿತಗಾರರು ಪೋಷಿಸಿಕೊಂಡು ಬಂದಿದ್ದರು. ಆದರೆ, ಇದನ್ನು ಧ್ವಂಸಗೊಳಿಸಿದ ಟಿಪ್ಪು ಸುಲ್ತಾನ್, ಮಸೀದಿಯನ್ನಾಗಿ ಪರಿವರ್ತಿಸಿದ್ದಾನೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
‘ಈ ಬಗ್ಗೆ ಅಧ್ಯಯನ, ಸರ್ವೆ ಹಾಗೂ ಉತ್ಖನನ ನಡೆಸಿ 30 ದಿನಗಳ ಒಳಗಾಗಿ ಹೈಕೋರ್ಟ್ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ನಿರ್ದೇಶಿಸಬೇಕು. ದೇವಾಲಯದ ಆವರಣದಲ್ಲಿರುವ ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯ ಕುರುಹುಗಳಾಗಿರುವ ಗರುಡ ಕಂಬ, ಕಲ್ಯಾಣಿ, ಸ್ತೂಪ, ಸ್ತಂಭ, ಹಿಂದೂ ದೇವ-ದೇವತೆಗಳ ಕಲ್ಲಿನ ಕೆತ್ತನೆಗಳು ಹಾಗೂ ಭೂಗತ ದೇವಸ್ಥಾನದ ಭಾಗ, ವಾಸ್ತು ಶಿಲ್ಪ, ಹೂತಿಟ್ಟ ವಿಗ್ರಹಗಳನ್ನು ಸಂರಕ್ಷಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರ, ಜಿಲ್ಲಾಡಳಿತಕ್ಕೆ ನಿರ್ದೇಶಿಸಬೇಕು’ ಎಂದು ಮನವಿ ಮಾಡಲಾಗಿದೆ.