ಮಂಡ್ಯ: ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿರುವ ಶ್ರೀರಂಗಪಟ್ಟಣ ಚಲೋ ಹಿನ್ನೆಲೆಯಲ್ಲಿ ಶ್ರೀನಗರಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಶುಕ್ರವಾರ ಸಾಮೂಹಿಕ ಪ್ರಾರ್ಥನೆ ನಿರ್ವಹಿಸುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಸ್ಜಿದ್-ಎ-ಆಲಾ, ಜಾಮಿಯಾ ಮಸೀದಿ ಸೇರಿದಂತೆ ಸುತ್ತ ಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಟಿಪ್ಪುವಿನ ಕಾಲದಲ್ಲಿ ನಿರ್ಮಿಸಲಾದ ಜಾಮಿಯಾ ಮಸೀದಿಗೆ ಪ್ರವೇಶಿಸಲು ಮತ್ತು ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಜೂನ್ 3 ಮತ್ತು 4ರಂದು ಶ್ರೀರಂಗಪಟ್ಟಣ ಚಲೋಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ.
ಇಂದು ಜಾಥಾಗೂ ಮುನ್ನ ಮಂಡ್ಯದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಲ್ಲದೆ ಇಂದಿನಿಂದ ಜೂನ್ 5ರ ಬೆಳಿಗ್ಗೆ 5ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಈ ಬಗ್ಗೆ ಮಂಡ್ಯ ಜಿಲ್ಲಾ ವಕ್ಫ್ ಅಧಿಕಾರಿಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ನಿರ್ವಹಿಸುವ ಸಂದರ್ಭದಲ್ಲಿ ಹಾಗೂ ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಮತ್ತು ಕೋಮು ಸೌರ್ಹಾರ್ದಕ್ಕೆ ಧಕ್ಕೆ ಆಗುವ ಸಂಭವ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಮಸ್ಜಿದ್-ಎ-ಆಲಾ, ಜಾಮಿಯಾ ಮಸೀದಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲು ಕೋರಲಾಗಿತ್ತು.