ಶಿವಮೊಗ್ಗ: ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಯ ನಂತರ ಮುಸ್ಲಿಮ್ ವಿರೋಧಿ ಹೇಳಿಕೆ ನೀಡಿದ್ದೀರಾ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಗೆ ಸೋಶಿಯಲ್ ಮೀಡಿಯಾ ಮೂಲಕ ಜೀವ ಬೆದರಿಕೆ ಹಾಕಿದ್ದ ಪ್ರಕರಣವನ್ನು ಭೇದಿಸಿರುವ ಬಾಗಲಕೋಟೆ ಪೊಲೀಸರು, ಶ್ರೀಕಾಂತ್ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಶಿಂಧಿ ಕುರಾಬೆಟ್ ಗ್ರಾಮದ ಎಸ್ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಆತನ ಹಿನ್ನೆಲೆ, ಆತ ಯಾವ ಸಂಘಟನೆಯಲ್ಲಿದ್ದಾನೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಶಿವಮೊಗ್ಗದಲ್ಲಿ ಹರ್ಷ ಕೊಲೆ ನಂತರ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದೀರಾ ಎಂದು ಆರೋಪಿಸಿ MLC ಡಿ ಎಸ್ ಅರುಣ್ ಮತ್ತು ಕುಟುಂಬಕ್ಕೆ ಫೇಸ್ಬುಕ್ ನಲ್ಲಿ ಮುಸ್ತಾಕ್ ಆಲಿ ಹೆಸರಲ್ಲಿ ಜೀವ ಬೆದರಿಕೆ ಹಾಕಲಾಗಿತ್ತು.
ನಿಮ್ಮ ತಲೆಯಲ್ಲಿ ಇವತ್ತು ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ ಅಷ್ಟೇ. ಆದರೆ ಮುಂದಿನ ದಿನ ನಿಮ್ಮದು. ನಿಮ್ಮ ಹೆಂಡತಿ ಮಕ್ಕಳೇ ಟಾರ್ಗೆಟ್ ಎಂದು ಬೆದರಿಕೆ ಹಾಕಲಾಗಿತ್ತು.
ಈ ಸಂಬಂಧ ಅರುಣ್ ಪೊಲೀಸರಿಗೆ ದೂರು ನೀಡಿದ್ದರು. ಬಾಗಲಕೋಟೆ ಪೊಲೀಸರು ಬೇರೊಂದು ಪ್ರಕರಣದಲ್ಲಿ ಶ್ರೀಕಾಂತ್ ನನ್ನು ಬಂಧಿಸಿದಾಗ ಈ ಆರೋಪಿಯೇ, ಮುಸ್ಲಿಮರ ಹೆಸರಲ್ಲಿ ಪರಿಷತ್ ಸದಸ್ಯ ಅರುಣ್ ಅವರಿಗೂ ಬೆದರಿಕೆ ಹಾಕಿದ್ದ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.