Home ಕ್ರೀಡೆ ಏಷ್ಯಾ ಕಪ್‌: ಪಾಕಿಸ್ತಾನ ವಿರುದ್ಧ ಶ್ರೀಲಂಕಾಗೆ 5 ವಿಕೆಟ್‌ಗಳ ಜಯ

ಏಷ್ಯಾ ಕಪ್‌: ಪಾಕಿಸ್ತಾನ ವಿರುದ್ಧ ಶ್ರೀಲಂಕಾಗೆ 5 ವಿಕೆಟ್‌ಗಳ ಜಯ

ದುಬೈ: ಏಷ್ಯಾ ಕಪ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಪೂರ್ವಭಾವಿಯಾಗಿ ನಡೆದ ಮಿನಿ ಫೈನಲ್‌ನಲ್ಲಿ ಶ್ರೀಲಂಕಾ ತಂಡ, ಪಾಕಿಸ್ತಾನದ ವಿರುದ್ಧ 5 ವಿಕೆಟ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸೂಪರ್‌-4 ಹಂತದ ಅಂತಿಮ ಪಂದ್ಯದಲ್ಲಿ, ಪಾಕಿಸ್ತಾನವನ್ನು 121ರನ್‌ಗಳಿಗೆ ನಿಯಂತ್ರಿಸಿದ ಲಂಕಾ, ಸಾಮಾನ್ಯ ಗುರಿಯನ್ನು 17 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ ಬೆನ್ನಟ್ಟಿತು.

ಆರಂಭದಲ್ಲಿ 2 ರನ್‌ಗಳಿಸುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡಿದ್ದ ಶ್ರೀಲಂಕಾ, ಪಾಕಿಸ್ತಾನಕ್ಕೆ ಸುಲಭ ತುತ್ತಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಆಟಗಾರ ಪಾತುಮ್‌ ನಿಸ್ಸಾಂಕ, ಅಜೇಯ ಅರ್ಧಶತಕ ದಾಖಲಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿ, ಗೆಲುವಿನತ್ತ ಮುನ್ನಡೆಸಿದರು. 48 ಎಸೆತಗಳನ್ನು ಎದುರಿಸಿದ ನಿಸ್ಸಾಂಕ, 1ಸಿಕ್ಸರ್‌ ಮತ್ತು 6 ಬೌಂಡರಿಗಳ ನೆರವಿನಿಂದ 55 ರನ್‌ಗಳಿಸಿ, ಪಾಕ್‌ ಬೌಲರ್‌ಗಳಿಗೆ ಸವಾಲಾಗಿ ನಿಂತರು.

ಭನುಕ ರಾಜಪಕ್ಷೆ 24 ರನ್‌ ಮತ್ತು ನಾಯಕ ದಾಸುನ್‌ ಶನಕ 21 ರನ್‌ಗಳಿಸಿದರು. ಪಾಕ್‌ ಪರ ಬೌಲಿಂಗ್‌ನಲ್ಲಿ ಮುಹಮ್ಮದ್‌ ಹಸ್ನೈನ್‌ ಮತ್ತು ಹಾರಿಸ್‌ ರೌಫ್‌ ತಲಾ 2 ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ್ದ ಪಾಕಿಸ್ತಾನದ ಮಧ್ಯಮ ಕ್ರಮಾಂಕ ತೀವ್ರ ವೈಫಲ್ಯ ಅನುಭವಿಸಿದ ಕಾರಣ19.1 ಓವರ್‌ಗಳಲ್ಲಿ 121 ರನ್‌ಗಳಿಸುವಷ್ಟರಲ್ಲೇ ಆಲೌಟ್‌ ಆಗಿತ್ತು. ನಾಯಕ ಬಾಬರ್‌ ಅಝಂ 30 ರನ್‌ಗಳಿಸಿದ್ದೇ ಅತ್ಯಧಿಕ ಸ್ಕೋರ್‌ ಆಗಿತ್ತು. ಮುಹಮ್ಮದ್‌ ರಿಝ್ವಾನ್‌ 14 ರನ್‌, ಫಖರ್‌ ಝಮಾನ್‌ ಮತ್ತು ಇಫ್ತಿಖಾರ್‌ ಅಹ್ಮದ್‌ ತಲಾ 13 ರನ್‌ಗಳಿಸಿದರು.

ಶ್ರೀಲಂಕಾ ಪರ ಬೌಲಿಂಗ್‌ನಲ್ಲಿ ವನಿಂದು ಹಸರಂಗ ಮೂರು ವಿಕೆಟ್‌,  ಮಹೇಶ್‌ ತೀಕ್ಷಣ ಮತ್ತು ಪ್ರಮೋದ್‌ ಮಧುಶನ್‌ ತಲಾ ಎರಡು ವಿಕೆಟ್‌ ಪಡೆದರು.

ಸೆಪ್ಟಂಬರ್‌ 11, ಭಾನುವಾರದಂದು ದುಬೈನಲ್ಲಿ ಪಾಕಿಸ್ತಾನ-ಶ್ರೀಲಂಕಾ ತಂಡಗಳ ನಡುವೆ ಫೈನಲ್‌ ಹಣಾಹಣಿ ನಡೆಯಲಿದೆ. 2014ರ ಬಳಿಕ ಇದೇ ಮೊದಲ ಬಾರಿಗೆ ಶ್ರೀಲಂಕಾ, ಪ್ರಮುಖ ಟೂರ್ನಿಯೊಂದರ ಫೈನಲ್‌ ಪ್ರವೇಶಿಸಿದೆ.

Join Whatsapp
Exit mobile version