Home ಟಾಪ್ ಸುದ್ದಿಗಳು ಶ್ರೀಲಂಕಾ: ಇಂಧನ ಯೋಜನೆಯ ಗುತ್ತಿಗೆ ಅದಾನಿ ಗ್ರೂಪ್ ಗೆ: ನಾಗರಿಕರ ಪ್ರತಿಭಟನೆ

ಶ್ರೀಲಂಕಾ: ಇಂಧನ ಯೋಜನೆಯ ಗುತ್ತಿಗೆ ಅದಾನಿ ಗ್ರೂಪ್ ಗೆ: ನಾಗರಿಕರ ಪ್ರತಿಭಟನೆ

ಕೊಲಂಬೊ: ಶ್ರೀಲಂಕಾದ ಇಂಧನ ಯೋಜನೆಯ ಗುತ್ತಿಗೆಯನ್ನು ಭಾರತದ ಉದ್ಯಮಿ ಗೌತಮ್ ಅದಾನಿ ಸಮೂಹ ಸಂಸ್ಥೆಗೆ ನೀಡಲಾಗಿದೆ ಎಂಬ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀಲಂಕಾ ಅಧ್ಯಕ್ಷರ ನಡುವಿನ ಸಂಶಯಾಸ್ಪದ ಒಪ್ಪಂದದ ಹಿನ್ನೆಲೆಯಲ್ಲಿ ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ನಾಗರಿಕರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಪೀಪಲ್ಸ್ ಪವರ್’ ಎಂಬ ನಾಗರಿಕರ ಸಂಘಟನೆ ಆಯೋಜಿಸಿದ ಈ ಪ್ರತಿಭಟನೆಯಲ್ಲಿ, “ಮೋದಿ ಮತ್ತು ರಾಜಪಕ್ಸ ರೂಪಿಸಿದ ಒಪ್ಪಂದ ಅಪಾರದರ್ಶಕ ಮತ್ತು ಕಾನೂನು ಬಾಹಿರವಾಗಿದೆ. ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಅದಾನಿಗೆ ಯೋಜನೆಯ ಗುತ್ತಿಗೆ ದೊರಕಿದೆ”  ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನ್ನಾರ್ ನಗರದಲ್ಲಿ 500 ಮೆಗಾವ್ಯಾಟ್ ಸೌರ ಮತ್ತು ಪವನಶಕ್ತಿ ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ಅದಾನಿ ಸಂಸ್ಥೆಗೆ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಸ್ಟಾಪ್ ಅದಾನಿ ಎಂಬ ಹ್ಯಾಷ್ ಟ್ಯಾಗ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಮನವಿಗೆ ಉತ್ತಮ ಸ್ಪಂದನೆ ದೊರಕಿದೆ.

ಈ ಬಗ್ಗೆ ದೂರವಾಣಿ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ನೂಝ್ಲಿ ಹಮೀಮ್, “ಬಿಡ್ಡಿಂಗ್ ನಡೆಸದೇ ಅದಾನಿಗೆ ಯೋಜನೆ ವಹಿಸಿಕೊಡಲು ಅನುಕೂಲವಾಗುವಂತೆ ಶ್ರೀಲಂಕಾ ಸರಕಾರ ವಿದ್ಯುತ್ಶಕ್ತಿ ಕಾಯ್ದೆಗೆ ಸರ್ವಾನುಮತದಿಂದ ತಿದ್ದುಪಡಿ ತಂದಿದೆ. ಭಾರತ ನೀಡಿದ ನೆರವಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ. ಆದರೆ ಬಿಡ್ಡಿಂಗ್ ನಡೆಸದೆ ಬೃಹತ್ ಯೋಜನೆಯನ್ನು ವಹಿಸಿಕೊಟ್ಟಿರುವುದು ಸರಿಯಲ್ಲ. ನಾವು ಬಹುರಾಷ್ಟ್ರೀಯ ಸಂಸ್ಥೆಗಳು ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳುವ ಪರವಾಗಿದ್ದೇವೆ, ಆದರೆ ಭ್ರಷ್ಟ ಮುಖಂಡರ ಭ್ರಷ್ಟ ಉಪಕ್ರಮಗಳ ಮೂಲಕ ನಮ್ಮ ದೇಶವನ್ನು ಬರಿದಾಗಿಸುವುದಕ್ಕೆ ನಮ್ಮ ಬೆಂಬಲವಿಲ್ಲ” ಎಂದು ಹೇಳಿದರು.

Join Whatsapp
Exit mobile version