ಬೆಂಗಳೂರು: ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ 100 SC-ST ವಿದ್ಯಾರ್ಥಿಗಳಿಗೆ 5 ರಿಂದ 10 ಲಕ್ಷ ರೂ. ಧನಸಹಾಯ ನೀಡಿ ಉದ್ಯೋಗ ಸೃಷ್ಟಿ ಮಾಡುವ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ರಾಜ್ಯ ಮಟ್ಟದ ಭೋವಿ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, 21ನೇ ಶತಮಾನ ಜ್ಞಾನದ ಶತಮಾನ. ನಿಮ್ಮ ಜ್ಞಾನವೇ ತಂತ್ರಾಂಶ ಜ್ಞಾನವಿದೆ. ಶಿಕ್ಷಣಕ್ಕೆ ಮಹತ್ವ ನೀಡಬೇಕು. ಸಮಾಜದ ಶೈಕ್ಷಣಿಕ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಎಸ್ ಸಿ ಎಸ್ ಟಿ ಜನಾಂಗಕ್ಕೆ 1000 ವಿದ್ಯಾರ್ಥಿಗಳಿಗೆ 100 ಹಾಸ್ಟೆಲ್ ಗಳನ್ನು ಬೆಂಗಳೂರು ,ಮೈಸೂರು ಹು-ಧಾರವಾಡ,ಗುಲ್ಬರ್ಗಾ, ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ. ಎಸ್ ಸಿ ಎಸ್ ಟಿ ವಿದ್ಯಾರ್ಥಿ ವೇತನ, ಉನ್ನತ ಶಿಕ್ಷಣಕ್ಕೆ ಸಹಾಯ ನೀಡಲಾಗುತ್ತಿದೆ.
ಬಡತನ ರೇಖೆಗಿಂತ ಕೆಳಗಿರುವ ಎಸ್ ಸಿ ಎಸ್ ಟಿ ಜನಾಂಗಕ್ಕೆ 75 ಯೂನಿಟ್ ಉಚಿತ ವಿದ್ಯುತ್ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಭೂ ಒಡೆತನಕ್ಕೆ 15 ಲಕ್ಷ ರೂ., ಮನೆ ನಿರ್ಮಾಣಕ್ಕೆ 2 ಲಕ್ಷ ನೀಡಲಾಗುತ್ತಿದೆ. ಭೋವಿ ಅಭಿವೃದ್ಧಿ ನಿಗಮಕ್ಕೆ175 ಕೋಟಿ ಯೋಜನೆಯನ್ನು ರೂಪಿಸಿ ಪ್ರಾರಂಭಿಸಲು ಸೂಚಿಸಲಾಗಿದೆ ಎಂದರು.ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಣ, ಉದ್ಯೋಗ, ಸಬಲೀಕರಣಕ್ಕಾಗಿ ಸರ್ಕಾರ ಬದ್ಧವಾಗಿದೆ. ದುರ್ಬಲ ವರ್ಗದವರ ಶಿಕ್ಷಣ , ಉದ್ಯೋಗ ನೀಡಿ, ಸ್ವಾಭಿಮಾನದ ಬದುಕು ನಡೆಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.