Home ಟಾಪ್ ಸುದ್ದಿಗಳು ಕಬ್ಬನ್ ಪಾರ್ಕ್ ನಲ್ಲಿ ಅಂಗವಿಕಲ ಮಕ್ಕಳಿಗಾಗಿ ‘ವಿಶೇಷ ಉದ್ಯಾನ ವನ’

ಕಬ್ಬನ್ ಪಾರ್ಕ್ ನಲ್ಲಿ ಅಂಗವಿಕಲ ಮಕ್ಕಳಿಗಾಗಿ ‘ವಿಶೇಷ ಉದ್ಯಾನ ವನ’

ಬೆಂಗಳೂರು: ಸಾಮಾನ್ಯ ಮಕ್ಕಳಂತೆ ವಿಶಿಷ್ಟಚೇತನ ಮಕ್ಕಳೂ ಆಟೋಟ ಹಾಗೂ ಮನರಂಜನೆ ಚಟುವಟಿಕೆಗಳಲ್ಲಿ ತೊಡಗಬೇಕು ಎನ್ನುವ ಉದ್ದೇಶದಿಂದ ಕಬ್ಬನ್‌ ಉದ್ಯಾನದ ಬಾಲಭವನ ಆವರಣದಲ್ಲಿ ‘ವಿಶೇಷ ಮಕ್ಕಳ ಉದ್ಯಾನ’ ನಿರ್ಮಿಸಲಾಗುತ್ತಿದೆ. ಅಂಗವಿಕಲರಿಗಾಗಿಯೇ ನಿರ್ಮಾಣಗೊಳ್ಳುತ್ತಿರುವ ರಾಜ್ಯದ ಮೊದಲ ಉದ್ಯಾನ ವನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

‘ಮೈಂಡ್‌ ಟ್ರೀ ಫೌಂಡೇಷನ್‌’ ಸಂಸ್ಥೆಯು ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಡಿ ಈ ವಿಶೇಷ ಉದ್ಯಾನವನ್ನು ನಿರ್ಮಿಸಿ ಜವಾಹರ ಬಾಲಭವನ ಸೊಸೈಟಿಗೆ ಹಸ್ತಾಂತರಿಸಲಿದೆ. ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು, 2022ರ ಮಾರ್ಚ್‌ ಒಳಗಾಗಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ. 

‘ಇದು ವಿಶೇಷ ಮಕ್ಕಳ ಸ್ನೇಹಿ ಉದ್ಯಾನ. ಅಂಗವಿಕಲ ಮಕ್ಕಳಿಗೆ ಮನರಂಜನೆ ನೀಡುವುದು ಹಾಗೂ ಇತರ ಮಕ್ಕಳಂತೆಯೇ ಆಡಲು ಅವರಿಗೂ ಸಮಾನ ಅವಕಾಶ ಒದಗಿಸುವುದು ಇದರ ಉದ್ದೇಶ. ಇಲ್ಲಿ ಅವರಿಗಾಗಿ ವಿಶೇಷ ಶೈಲಿಯ ಆಟಿಕೆಗಳನ್ನು ಅಳವಡಿಸಲಾಗುತ್ತಿದೆ. ಗಾಲಿ ಕುರ್ಚಿಯಲ್ಲಿ ಬರುವ ಮಕ್ಕಳು ಕೂಡಾ ಕುರ್ಚಿಯಲ್ಲಿ ಕುಳಿತುಕೊಂಡೇ ಆಟವಾಡಬಹುದು’ ಎಂದು ಜವಾಹರ ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ಪತ್ರಿಕಾ ಪ್ರಕಟನೆಯಲ್ಲಿತಿಳಿಸಿದರು.

‘ಸುಮಾರು 15 ಬಗೆಯ ಆಟಿಕೆಗಳು ಉದ್ಯಾನದಲ್ಲಿ ಇರಲಿವೆ. ಅಂಗವಿಕಲ ಮಕ್ಕಳು ಪೋಷಕರೊಂದಿಗೆ ಬಂದು ಉದ್ಯಾನದಲ್ಲಿ ಆಟವಾಡಬಹುದು. ಒಂದು ವೇಳೆ ಮಕ್ಕಳು ನೆಲಕ್ಕೆ ಬಿದ್ದರೂ ಯಾವುದೇ ಗಾಯವಾಗದಂತೆ ತಡೆಯಲು ಮೃದುವಾದ ನೆಲಹಾಸನ್ನು ವಿನ್ಯಾಸ ಮಾಡಲಾಗಿದೆ.ಕೂರಲು ಬಣ್ಣ ಬಣ್ಣದ ಆಸನಗಳ ವ್ಯವಸ್ಥೆ, ಆಟದ ಪರಿಕರಗಳು, ಅಲಂಕಾರಿಕ ಸಸ್ಯಗಳು, ಕಿರು ಸುರಂಗ ಸೇರಿದಂತೆ ರಂಗಿನ ಲೋಕವೇ ಅವರಿಗಾಗಿ ಸೃಷ್ಟಿಯಾಗುತ್ತಿದೆ. ಉದ್ಯಾನಕ್ಕೆ ಬರುವ ವಿಶೇಷ ಮಕ್ಕಳು ಇಲ್ಲಿ ಖುಷಿ ಪಡುವುದರಲ್ಲಿ ಅನುಮಾನವಿಲ್ಲ’ ಎಂದು ಅವರು ಹೇಳಿದರು. 

Join Whatsapp
Exit mobile version