Home ಕ್ರೀಡೆ ಬಿಸಿಸಿಐ ಅಧ್ಯಕ್ಷ ಗಾದಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್‌ ಬಿನ್ನಿ ?

ಬಿಸಿಸಿಐ ಅಧ್ಯಕ್ಷ ಗಾದಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್‌ ಬಿನ್ನಿ ?

ಮುಂಬೈ: ​​​​​​​ಅಧಿಕಾರದಲ್ಲಿ ಮುಂದುವರಿಯಲು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಯಶಸ್ವಿಯಾದ ಬಳಿಕವೂ, ಸೌರವ್‌ ಗಂಗೂಲಿ ಬಿಸಿಸಿಐ ಅಧ್ಯಕ್ಷ ಗಾದಿಯಿಂದ ಕೆಳಗಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಗಂಗೂಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ, ಐಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದು, ಇತ್ತ ತೆರವಾಗುವ ಬಿಸಿಸಿಐ ಅಧ್ಯಕ್ಷ ಪದವಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್ ಮೈಕಲ್ ಬಿನ್ನಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.

ಬಿಸಿಸಿಐಯ 91ನೇ ವಾರ್ಷಿಕ ಸಾಮಾನ್ಯ ಸಭೆ ಅಕ್ಟೋಬರ್‌ 18ರಂದು ಮುಂಬೈನಲ್ಲಿ ನಿಗದಿಯಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಒಟ್ಟು 38 ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳು ಮತ ಚಲಾಯಿಸಲಿದ್ದು ಅದೇ ದಿನ ಫಲಿತಾಂಶವೂ ಹೊರಬೀಳಲಿದೆ.

ಪ್ರಮುಖ ಹಿಂದಿ ದಿನ ದಿನಪತ್ರಿಕೆ ದೈನಿಕ್ ಜಾಗರಣ್ ವರದಿಯ ಪ್ರಕಾರ,  ಗುರುವಾರ ನಡೆದ ಬಿಸಿಸಿಐ ಉನ್ನತ ಅಧಿಕಾರಿಗಳ ಸಭೆಯಲ್ಲಿ ಗಂಗೂಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಸಭೆಯಲ್ಲಿ ಸ್ವತಃ ಗಂಗೂಲಿ, ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಧುಮಾಲ್ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಭಾಗವಹಿಸಿದ್ದರು ಎಂದು ಜಾಗರಣ್‌ ಹೇಳಿದೆ.

ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ, 1983ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ರೋಜರ್ ಬಿನ್ನಿಗೆ, ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅವರಿಂದ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಬಿನ್ನಿ, ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.  ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಯಲಿದ್ದಾರೆ ಎನ್ನಲಾಗಿದೆ.

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆಯನ್ನು ಸೌರವ್‌ ಗಂಗೂಲಿ, ಪ್ರತಿನಿಧಿಸಲಿದ್ದಾರೆ. ಅಚ್ಚರಿಯ ಆಯ್ಕೆ ಎಂಬಂತೆ ಸಂತೋಷ್ ಮೆನನ್ ಬದಲಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಬಿನ್ನಿ, ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ಬಿಸಿಸಿಐ ಸಂವಿಧಾನದಲ್ಲಿ ಕೆಲ ಬದಲಾವಣೆ ಕೋರಿ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಪುರಸ್ಕರಿಸಿತ್ತು ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್‌ ಶಾ ಅವರ ಅಧಿಕಾರವಧಿ ಮುಂದುವರಿಯಲು ಅವಕಾಶ ಮುಕ್ತವಾಗಿತ್ತು.

Join Whatsapp
Exit mobile version