Home ಟಾಪ್ ಸುದ್ದಿಗಳು ಸೂರಿಂಜೆ ಗ್ರಾ.ಪಂ :  SDPI ಬೆಂಬಲದಿಂದ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ

ಸೂರಿಂಜೆ ಗ್ರಾ.ಪಂ :  SDPI ಬೆಂಬಲದಿಂದ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ

ಮಂಗಳೂರು : ಮಂಗಳೂರು ತಾಲೂಕಿನ ಸೂರಿಂಜೆ ಗ್ರಾಮ ಪಂಚಾಯತ್‌ನ ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೀತಾ ಅವರು ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೋಪಾಲ ಆಯ್ಕೆಯಾಗಿದ್ದಾರೆ.

SDPI ಬೆಂಬಲಿತ ನಾಲ್ವರು ಸದಸ್ಯರ ಬೆಂಬಲದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವಲ್ಲಿ ಎಸ್‌ಡಿಪಿಐ ಕಾರ್ಯತಂತ್ರ ಯಶಸ್ವಿಯಾಗಿದೆ.

ಒಟ್ಟು 12 ಸದಸ್ಯ ಬಲದ ಸೂರಿಂಜೆ ಗ್ರಾಮ ಪಂಚಾಯತ್‌ನಲ್ಲಿ 6 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದು, ಎಸ್‌ಡಿಪಿಐ ಬೆಂಬಲಿತ ನಾಲ್ವರು ಸದಸ್ಯರಿದ್ದಾರೆ. ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಕಾಂಗ್ರೆಸ್‌ಗಿಂತ ಹೆಚ್ಚಿನ ಎಸ್‌ಡಿಪಿಐ ಸದಸ್ಯರಿದ್ದರೂ ಬಿಜೆಪಿಗೆ ಅಧಿಕಾರ ತಪ್ಪಿಸಲು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ.

ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ನಾಲ್ವರು ಎಸ್‌ಡಿಪಿಐ ಬೆಂಬಲಿತರು ಮತ್ತು ಓರ್ವ ಬಿಜೆಪಿ ಬೆಂಬಲಿತ ಸದಸ್ಯರ ಮತ ಸೆಳೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೀತಾ ಅವರು 7 ಮತಗಳನ್ನು ಪಡೆದು 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗೆ ಕಾಂಗ್ರೆಸ್ ಬೆಂಬಲಿಸಿದೆ. ಆದರೆ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡಿರುವ ಬಿಜೆಪಿಯ ಓರ್ವ ಸದಸ್ಯ, ಉಪಾಧ್ಯಕ್ಷ ಆಯ್ಕೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಗೆ ಮತ ನೀಡಲಿಲ್ಲ. ಉಪಾಧ್ಯಕ್ಷ ಆಯ್ಕೆಯಲ್ಲಿ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿ ಅಬ್ದುಲ್ ಮಲಿಕ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೋಪಾಲ ತಲಾ ಆರು ಮತಗಳನ್ನು ಪಡೆದು ಸಮಬಲ ಸಾಧಿಸಿದರು. ಚೀಟಿ ಎತ್ತುವ ಆಯ್ಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಅದೃಷ್ಟ ಖುಲಾಯಿಸಿದೆ.

ಸೂರಿಂಜೆ ಗ್ರಾಮ ಪಂಚಾಯತ್‌ನ ಮೊದಲ ಅವಧಿಯಲ್ಲಿ ಬಿಜೆಪಿ ಬೆಂಬಲಿತರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅಧಿಕಾರಕ್ಕೇರಿದ್ದರು.

Join Whatsapp
Exit mobile version