Home ಟಾಪ್ ಸುದ್ದಿಗಳು ಪ್ರಧಾನಿ ಕಚೇರಿ ವಂಚಕನೊಂದಿಗೆ ಮಗನ ಸಂಪರ್ಕ: ಗುಜರಾತ್ ಹಿರಿಯ ಅಧಿಕಾರಿ ರಾಜೀನಾಮೆ

ಪ್ರಧಾನಿ ಕಚೇರಿ ವಂಚಕನೊಂದಿಗೆ ಮಗನ ಸಂಪರ್ಕ: ಗುಜರಾತ್ ಹಿರಿಯ ಅಧಿಕಾರಿ ರಾಜೀನಾಮೆ

ಅಹ್ಮದಾಬಾದ್: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ವಂಚಿಸಿದ್ದ ತಂಡದಲ್ಲಿದ್ದ ಮಗನ ಬಗ್ಗೆ ತೀವ್ರ ವಿವಾದ ಎದ್ದುದರಿಂದ ಗುಜರಾತ್ ಮುಖ್ಯಮಂತ್ರಿಯ ಕಚೇರಿಯಲ್ಲಿ ಹಿರಿಯ ಅಧಿಕಾರಿ ಆಗಿರುವ ಹಿತೇಶ್ ಪಂಡ್ಯ ರಾಜೀನಾಮೆ ನೀಡಿದ್ದಾರೆ.


ಜೆಡ್ ಪ್ಲಸ್ ಭದ್ರತೆ, 5 ಸ್ಟಾರ್ ಹೋಟೆಲ್ ವಾಸ್ತವ್ಯ ಇತ್ಯಾದಿ ದುರುಪಯೋಗವನ್ನು ಕಾಶ್ಮೀರದಲ್ಲಿ ಆ ವಂಚಕರು ಮಾಡಿದ್ದರು. ವಂಚಕ ಕಿರಣ್ ಭಾಯಿ ಪಟೇಲ್ ನೇತೃತ್ವದ ವಂಚಕರ ತಂಡದಲ್ಲಿ ಹಿತೇಶ್ ಪಾಂಡ್ಯರ ಮಗ ಅಮಿತ್ ಪಂಡ್ಯ ಇದ್ದ.
ಹಿತೇಶ್ ಪಾಂಡ್ಯ ಅವರು ಗುಜರಾತ್ ಮುಖ್ಯಮಂತ್ರಿ ಕಚೇರಿಯ ಪಿಆರ್’ಓ- ಸಾರ್ವಜನಕ ಸಂಪರ್ಕಾಧಿಕಾರಿಯಾಗಿ 2001ರಿಂದ ಇದ್ದರು. ಶುಕ್ರವಾರ ಸಂಜೆ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲರಿಗೆ ರಾಜೀನಾಮೆ ಪತ್ರ ನೀಡಿದರು. ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಕಚೇರಿಯ ಹೆಸರು ಕೆಡಬಾರದೆಂದು ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ.
“ನನ್ನ ಮಗ ಮುಗ್ಧ ಆದರೂ ಸಿಎಂ, ಪಿಎಂ ಕಚೇರಿಗಳಿಗೆ ಮಸಿ ಹಚ್ಚದಿರಲು ಈ ರಾಜೀನಾಮೆ ನೀಡಿದ್ದೇನೆ” ಎಂದು ರಾಜೀನಾಮೆ ಪತ್ರದಲ್ಲಿ ಪಾಂಡ್ಯ ಬರೆದಿದ್ದಾರೆ.


ಗುಜರಾತ್ ಬಿಜೆಪಿಯು ಅಮಿತ್ ಪಾಂಡ್ಯನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿದೆ. ಗುಜರಾತ್ ಬಿಜೆಪಿ ಉತ್ತರ ವಲಯದ ಸಾಮಾಜಿಕ ಜಾಲ ತಾಣದ ಉಸ್ತುವಾರಿಯಾಗಿ ಅಮಿತ್ ಇದ್ದ. ಆದರೆ ಜಮ್ಮು ಕಾಶ್ಮೀರದ ಪೊಲೀಸರು ಅಮಿತ್ ಹೆಸರನ್ನು ವಂಚಕ ತಂಡದ ಮೊಕದ್ದಮೆಯಲ್ಲಿ ಸೇರಿಸಿಲ್ಲ. ಆದರೆ ಗುಜರಾತಿನ ಅಮಿತ್ ಜೊತೆಗಾರ ಜಯ್ ಸಿತಾಪರ ಎಂಬವರನ್ನು ಮೊಕದ್ದಮೆಯಲ್ಲಿ ಸಾಕ್ಷಿಯಾಗಿ ಹೆಸರಿಸಲಾಗಿದೆ.
ವಂಚಕ ಕಿರಣ್ ಪಟೇಲ್ ತಿಂಗಳ ಕಾಲ ಪ್ರಧಾನಿ ಕಚೇರಿ ಅಧಿಕಾರಿ ಎಂದು ಹೇಳಿಕೊಂಡು ಸರ್ವ ಅನುಕೂಲ ಪಡೆದಿದ್ದ. ಇತ್ತೀಚೆಗೆ ಅತನನ್ನು ಬಂಧಿಸಲಾಗಿದೆ. ಆದರೂ ಗುಂಪಿನ ಅಮಿತ್ ಮತ್ತು ಜಯ್ ಸಿತಾಪರ ಹೆಸರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿಲ್ಲ.
ಕಳೆದ ವಾರ ಅವರನ್ನು ಪ್ರಶ್ನಿಸಲು ಪೊಲೀಸರು ಕರೆಸಿದ್ದರು. ಅವರೂ ವಂಚಕನ ಬಲೆಗೆ ಬಿದ್ದಿದ್ದವರು ಎಂದು ಪೊಲೀಸರು ಹೇಳಿದ್ದಾರೆ.


ಗಡಿ ನಿಯಂತ್ರಣ ಗರೆಯ ಸೇನಾ ಠಾಣೆಗಳ ಸಹಿತ ಹಲವು ಸೂಕ್ಷ್ಮ ಪ್ರದೇಶಗಳಿಗೆ ವಂಚಕ ಭೇಟಿ ನೀಡಿದ್ದ. ಬಂಧನಕ್ಕೆ ಮೊದಲು ಆತ ಅಧಿಕಾರಿಗಳ ಸಭೆಯನ್ನೂ ನಡೆಸಿದ್ದ.
ಮಾರ್ಚ್ 2ರಂದು ಬಂಧಿತನಾದ ವಂಚಕ ಕಿರಣ್ ಪಟೇಲ್ ನನ್ನ ಮಗನನ್ನೂ ಪ್ರಧಾನಿ ಕಚೇರಿಯ ತಂತ್ರ ಕೌಶಲ ವಿಭಾಗದ ನಿರ್ದೇಶಕ ಎಂದು ವಂಚಿಸಿದ್ದ ಎನ್ನುತ್ತಾರೆ ಹಿತೇಶ್ ಪಾಂಡ್ಯ.
ಎರಡು ವಾರಗಳ ಕಾಲ ವಂಚಕನ ಬಂಧನವನ್ನು ಗುಟ್ಟಾಗಿಡಲಾಗಿತ್ತು. ಮಾರ್ಚ್ 15ರಂದು ಮ್ಯಾಜಿಸ್ಟ್ರೇಟರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕವಷ್ಟೆ ಸುದ್ದಿ ಹೊರಬಿದ್ದಿತ್ತು.
ವಂಚಕ ಪಟೇಲ್ ಜೊತೆಗೆ ಶ್ರೀನಗರದ ಪಂಚ ತಾರಾ ಹೋಟೆಲಿನಲ್ಲಿ ಗುಜರಾತಿನ ಅಮಿತ್, ಜಯ್ ಮತ್ತು ರಾಜಸ್ತಾನದ ತ್ರಿಲೋಕ್ ಸಿಂಗ್ ಸಹಾಯಕರಾಗಿ ಇದ್ದರು.
ಪ್ರಧಾನಿ ಕಚೇರಿಯ ಐಎಎಸ್ ಅಧಿಕಾರಿ ತಂಡದವರು ಕಾಶ್ಮೀರಕ್ಕೆ ಭೇಟಿ ನೀಡುವುದಾಗಿ ಅಕ್ಟೋಬರ್ ನಲ್ಲಿ ದಕ್ಷಿಣ ಕಾಶ್ಮೀರ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಮಾಹಿತಿ ಬಂದು, ಅವರು ಎಲ್ಲರಿಗೂ ಕರ್ತವ್ಯ ನಿರ್ವಹಿಸಲು ಹೇಳಿದ್ದರು.


ಜೆಡ್ ಪ್ಲಸ್ ಭದ್ರತೆ, ಪೊಲೀಸ್ ಬೆಂಗಾವಲು, ವಿಐಪಿ ಆತಿಥ್ಯದೊಂದಿಗೆ ವಂಚಕ ಎಲ್ಲೆಡೆ ಸುತ್ತಾಡಿದ್ದ. ವಂಚಕ ಪಟೇಲ್ ಟ್ವಿಟರ್ ಖಾತೆ ಆಗ ಸಾವಿರಾರು ಹಿಂಬಾಲಕರನ್ನು ಹೊಂದಿತ್ತು ಮತ್ತು ಅದರಲ್ಲಿ ಗುಜರಾತ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ವಘೇಲ ಸಹ ಇದ್ದರು.
ಆತ ತನ್ನ ಅಧಿಕೃತ ಭೇಟಿಯ ಫೋಟೋಗಳನ್ನು ಸಹ ಮಾರ್ಚ್ 2ರವರೆಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ.

Join Whatsapp
Exit mobile version