ಹಾಸನ: ಜಾರಿ ನಿರ್ದೇಶನಾಲಯದಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ, ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಎನ್.ಆರ್ ವೃತ್ತದ ಮೂಲಕ ಪ್ರಧಾನ ಅಂಚೆ ಕಚೇರಿವರೆಗೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಸರ್ಕಾರಿ ಸ್ವಾಮ್ಯದ ಸ್ವತಂತ್ರ ತನಿಖಾ ಸಂಸ್ಥೆಯನ್ನು ಕೇಂದ್ರ ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ, ವಿಚಾರಣೆ ನೆಪದಲ್ಲಿ ಸೋನಿಯಾ ಗಾಂಧಿ ಅವರನ್ನು ರಾಜಕೀಯವಾಗಿ ಕುಗ್ಗಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ತನಿಖೆ ಹೆಸರಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ ಸರ್ಕಾರ, ಶತಮಾನಗಳಿಂದ ದೇಶಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷವನ್ನು ಮಟ್ಟ ಹಾಕಲು ಇಲ್ಲದ ಕುತಂತ್ರಗಳನ್ನು ಮಾಡುತ್ತಿದೆ. ಸೋನಿಯಾ ಗಾಂಧಿ ಹೆದರುವ ಕುಟುಂಬದಿಂದ ಬಂದಿಲ್ಲ, ಯಾವುದೇ ತನಿಖೆಗೆ ಸಿದ್ಧರಿದ್ದಾರೆ, ಆದರೆ ನ್ಯಾಯಸಮ್ಮತ ತನಿಖೆಗೆ ಬದಲಾಗಿ, ವೈಯಕ್ತಿಕ ದ್ವೇಷದಿಂದ ತನಿಖೆಗೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ದೇಶದ ಜನರು ಬಿಜೆಪಿಗೆ ಬುದ್ದಿ ಕಲಿಸಲಿದ್ದಾರೆ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರ ಯಾವುದೇ ಪಾತ್ರವಿಲ್ಲ. ಎಂಬುದು ಗೊತ್ತಿದ್ದರೂ, ಅವರಿಗೆ ಇಲ್ಲದ ತೊಂದರೆ ನೀಡಲಾಗುತ್ತಿದೆ ಎಂದು ದೂರಿದರು.
ಶಿವಶಂಕರ್ ರೆಡ್ಡಿ , ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಮುಖಂಡರಾದ ಬಾಗೂರು ಮಂಜೇಗೌಡ, ಬನವಾಸೆ ರಂಗಸ್ವಾಮಿ, ಎಚ್.ಕೆ. ಮಹೇಶ್, ಶೇಷೆಗೌಡ, ವಿನಯ್ ಗಾಂಧಿ, ದೇವರಾಜೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು, ತಾರಾ ಚಂದನ್, ಪಟೇಲ್ ಶಿವಪ್ಪ, ಹೆಮ್ಮಿಗೆ ಮೋಹನ್, ರಘು, ಆರಿಫ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಬಿಗಿ ಬಂದೋಬಸ್ತ ಮಧ್ಯೆಯೂ ಇಲ್ಲಿನ ಪ್ರಧಾನ ಅಂಚೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಪ್ರತಿಭಟನಾಕಾರರನ್ನುವಶಕ್ಕೆ ಪಡೆದ ಪೊಲೀಸರು, ನಂತರ ಬಿಡುಗಡೆ ಮಾಡಿದರು.