ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪರನ್ನು ಬಳಸಿಕೊಳ್ಳಲು ಅವರ ಮಗ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ನೀಡಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು 2 ಬಾರಿ ಕೆಳಗೆ ಇಳಿಸಿದ್ದು, ಪಾಪ ಅವರನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ಇದೀಗ ಯಡಿಯೂರಪ್ಪ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಚೆನ್ನಾಗಿ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ವಿಜಯೇಂದ್ರಗೆ ತಾತ್ಕಾಲಿಕ ರಾಜ್ಯಾಧ್ಯಕ್ಷ ಪಟ್ಟ ನೀಡಲಾಗಿದೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕನಾಗಲು ಯತ್ನಾಳ್ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದರು ಎಂದು ವ್ಯಂಗ್ಯವಾಡಿದ ಸಚಿವರು, ದೆಹಲಿಯಲ್ಲಿ ತಿಂಗಳುಗಟ್ಟಲೇ ಠಿಕಾಣಿ ಕೂಡ ಅವರು ಹೂಡಿದ್ದರು. ಆದರೆ ಅವರ ಆಸೆ ಫಲಿಸಲಿಲ್ಲ ಎಂದು ಹೇಳಿದ್ದಾರೆ.
ಶೀಘ್ರವೇ ಬಿಜೆಪಿ ಹಾಗೂ ಜೆಡಿಎಸ್ನಿಂದ ಬಹುತೇಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ. ಲೋಕಸಭಾ ಚುನಾವಣೆ ವೇಳೆಗೆ ಎರಡೂ ಪಕ್ಷಗಳು ಸ್ವಚ್ಛವಾಗುತ್ತವೆ ಎಂದು ಇದೇ ಸಂದರ್ಭದಲ್ಲಿ ಎಂ.ಬಿ. ಪಾಟೀಲ್ ಹೇಳಿದರು.