Home ಟಾಪ್ ಸುದ್ದಿಗಳು ಅಕ್ಷಯ್ ಕುಮಾರ್ ಕಪಾಳಕ್ಕೆ ಹೊಡೆದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಹಿಂದುತ್ವ ಸಂಘಟನೆ

ಅಕ್ಷಯ್ ಕುಮಾರ್ ಕಪಾಳಕ್ಕೆ ಹೊಡೆದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಹಿಂದುತ್ವ ಸಂಘಟನೆ

ಹೊಸದಿಲ್ಲಿ: ಅಕ್ಷಯ್ ಕುಮಾರ್ ನಟನೆಯ ಒಂಬತ್ತು ಸಿನಿಮಾಗಳು ಒಂದರ ಹಿಂದೊಂದು ಮಕಾಡೆ ಮಲಗಿವೆ. ಇದೀಗ ಅಕ್ಷಯ್​ರ ಹೊಸ ಸಿನಿಮಾ ‘ಓ ಮೈ ಗಾಡ್ 2’ (OMG 2) ಬಿಡುಗಡೆ ಆಗಿದೆ. ಸಿನಿಮಾ ಸಾಧಾರಣ ಆರಂಭವನ್ನು ಪಡೆದುಕೊಂಡಿದ್ದು, ವೀಕೆಂಡ್​ನಲ್ಲಿ ಕಲೆಕ್ಷನ್ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಹೀಗಿರುವಾಗ ಸಿನಿಮಾದ ಕತೆ ತುಸು ವಿವಾದಕ್ಕೆ ಕಾರಣವಾಗಿದೆ. ಕೆಲವು ಹಿಂದುತ್ವ ಸಂಘಟನೆಗಳು ಸಿನಿಮಾದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, ಬಾಯ್​ಕಾಟ್​ಗೆ ಒತ್ತಾಯಿಸಿವೆ. ಒಂದು ಸಂಘಟನೆಯಂತೂ ಅಕ್ಷಯ್​ಕುಮಾರ್​ಗೆ ಕಪಾಳಕ್ಕೆ ಹೊಡೆದವರಿಗೆ ನಗದು ಪ್ರಶಸ್ತಿಯನ್ನು ಘೋಷಿಸಿದೆ.

ಅಕ್ಷಯ್ ಕುಮಾರ್ ಪಾತ್ರವೇನು?

‘ಓಹ್ ಮೈ ಗಾಡ್ 2’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಹಿಂದೂ ದೇವ ಶಿವನ ಶಿವಗಣದ ಸಂದೇಶವಾಹಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ತಮ್ಮ ಭಕ್ತನ ಸಹಾಯಕ್ಕೆ ನಿಲ್ಲುವ ಶಿವ ಗಣದ ಸದಸ್ಯನ ಪಾತ್ರ ಅವರದ್ದು. ಸಿನಿಮಾದ ಕತೆ ಲೈಂಗಿಕ ಶಿಕ್ಷಣದ ಕತೆಯನ್ನು ಒಳಗೊಂಡಿದೆ. ಆದರೆ ಅಕ್ಷಯ್ ಕುಮಾರ್​ ಅವರ ಈ ಸಿನಿಮಾದ ಬಗ್ಗೆ ಕೆಲವು ಹಿಂದುತ್ವ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಕೆಲವೆಡೆ ಪ್ರತಿಭಟನೆಗಳು ಸಹ ನಡೆದಿವೆ.

ಸಿನಿಮಾದಲ್ಲಿ ಶಿವನ ಭಕ್ತರಿಗೆ, ಶಿವಗಣಕ್ಕೆ ಅಪಮಾನ ಮಾಡಲಾಗಿದೆ ಎಂದು ಹಿಂದೂಪರ ಸಂಘಟನೆ ಸದಸ್ಯರು ಆಕ್ಷೇಪಿಸಿದ್ದು, ರಾಷ್ಟ್ರೀಯ ಹಿಂದೂ ಪರಿಷದ್​ನ ಸದಸ್ಯರು ಅಕ್ಷಯ್ ಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಸಿನಿಮಾದ ಪ್ರದರ್ಶನವನ್ನು ಈ ಕೂಡಲೇ ಬಂದ್ ಮಾಡುವಂತೆ ಒತ್ತಾಯಿಸಿದ್ದಾರೆ. ಇನ್ನು ಆಗ್ರಾದ ಹಿಂದುತ್ವ ಸಂಘಟನೆಯೊಂದು ಸಿನಿಮಾ ವಿರುದ್ಧ ಆಕ್ರೋಶ ಹೊರಹಾಕಿದ್ದು, ನಟ ಅಕ್ಷಯ್ ಕುಮಾರ್​ ಕಪಾಳಕ್ಕೆ ಹೊಡೆದವರಿಗೆ ಅಥವಾ ಅವರ ಮೇಲೆ ಉಗಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ.

ಓಎಂಜಿ 2 ಸಿನಿಮಾವು ಅಪ್ರಾಪ್ತರಿಗೆ ಲೈಂಗಿಕ ಶಿಕ್ಷಣದ ಅಗತ್ಯದ ಬಗ್ಗೆ ಸಂದೇಶವನ್ನು ಒಳಗೊಂಡಿದೆ. ಸಿನಿಮಾದಲ್ಲಿ ಶಿವ ಭಕ್ತ ಪಂಕಜ್ ತ್ರಿಪಾಠಿ ತನ್ನ ಪುತ್ರನ ಕಾರಣಕ್ಕೆ ಸಮಸ್ಯೆಗೆ ಸಿಲುಕುತ್ತಾನೆ, ಲೈಂಗಿಕ ಶಿಕ್ಷಣದ ಕೊರತೆಯಿಂದಲೇ ತನ್ನ ಮಗ ಕೃತ್ಯವೊಂದನ್ನು ಎಸಗಿದ್ದಾನೆ ಎಂದು ಅರಿತು, ಶಾಲೆಯು ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡದೇ ಇರುವ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಹೀಗೆ ಸಂಕಟದಲ್ಲಿ ಸಿಲುಕಿಕೊಂಡ ಭಕ್ತನಿಗೆ ಸಹಾಯ ಮಾಡಲೆಂದು ಭಗವಂತ ಶಿವನ ಆದೇಶದ ಮೇರೆಗೆ ಶಿವಗಣದ ಸದಸ್ಯನಾಗಿ ಅಕ್ಷಯ್ ಕುಮಾರ್ ಭೂಮಿಗೆ ಬರುತ್ತಾರೆ. ಹೀಗೆ ಕತೆ ಸಾಗುತ್ತದೆ.

ಸಿಬಿಎಫ್​ಸಿ ವಿವಾದ

ಸಿನಿಮಾ ಬಿಡುಗಡೆಗೆ ಮುನ್ನವೂ ಸಾಕಷ್ಟು ವಿವಾದ ಎಬ್ಬಿಸಿತ್ತು. ಸಿಬಿಎಫ್​ಸಿಯು 16 ಕಟ್​ಗಳನ್ನು ಸಿನಿಮಾಕ್ಕೆ ಸೂಚಿಸಿದ್ದಲ್ಲದೆ ಎ ಪ್ರಮಾಣ ಪತ್ರ ನೀಡಿ ಹದಿನೆಂಟು ವರ್ಷದ ಒಳಗಿನ ಮಕ್ಕಳು ಸಿನಿಮಾ ನೋಡದಂತೆ ನಿರ್ಬಂಧ ವಿಧಿಸಿತ್ತು. ಹಾಗೋ ಹೀಗೋ ಬಿಡುಗಡೆ ಆದ ಬಳಿಕ ಈಗ ಹಿಂದುತ್ವ ಸಂಘಟನೆಗಳ ಆಕ್ರೋಶವನ್ನು ಸಿನಿಮಾ ಎದುರಿಸುತ್ತಿದೆ.

Join Whatsapp
Exit mobile version