ಬೆಂಗಳೂರು: ಮುಂಬರುವ ತಿಂಗಳಿನಿಂದ ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆಯ ಸಮಸ್ಯೆ ಪರಿಹರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಮನಗರದಲ್ಲಿ ಬುಧವಾರ ‘ಸ್ವಚ್ಛ ಆಸ್ಪತ್ರೆ ನಮ್ಮ ಆದ್ಯತೆ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವೈದ್ಯರ ಗ್ರಾಮೀಣ ಸೇವೆಯಡಿ 3 ಸಾವಿರಕ್ಕೂ ಹೆಚ್ಚು ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಗೆ ಲಭ್ಯವಾಗಲಿದ್ದಾರೆ.
ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸರಿಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ತಿಂಗಳಿನಿಂದ ವೈದ್ಯರ ಕೊರತೆ ನೀಗಿಸುವ ಕಾರ್ಯ ಮಾಡ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಿ.ಜಿ ಡಾಕ್ಟರ್ಸ್ ಕೂಡ ಒಂದು ವರ್ಷ ಕಡ್ಡಾಯ ಸೇವೆಗೆ ಸಿಗಲಿದ್ದಾರೆ. ಹೀಗಾಗಿ ವೈದ್ಯರ ಕೊರತೆ ಇರುವ ಎಲ್ಲ ಕಡೆಗಳಲ್ಲೂ ವೈದ್ಯರನ್ನು ತುಂಬಿಕೊಡ್ತೇವೆ. ಮುಂದಿನ ತಿಂಗಳಿನಿಂದಲೇ ಈ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ.
ನರ್ಸ್ ಮತ್ತು ಗ್ರೂಪ್ ಡಿ ಹುದ್ದೆಗಳ ಕೊರತೆಯಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ.
ಸ್ಪಚ್ಛ ಆಸ್ಪತ್ರೆ, ನಮ್ಮ ಆದ್ಯತೆ ಅಭಿಯಾನಕ್ಕೆ ಚಾಲನೆ
‘ಸ್ವಚ್ಛ ಆಸ್ಪತ್ರೆ ನಮ್ಮ ಆದ್ಯತೆ’ ಧ್ಯೇಯವಾಕ್ಯದೊಂದಿಗೆ ರಾಜ್ಯದಲ್ಲಿರುವ ಎಲ್ಲಾ ಹಂತದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಕೈಗೊಳ್ಳುವ ಅಭಿಯಾನಕ್ಕೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಅಭಿಯಾನದಡಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಅಭಿಯಾನದಡಿ ಆಸ್ಪತ್ರೆಗಳಲ್ಲಿ ಅನುಪಯುಕ್ತ ಸಾಮಗ್ರಿಗಳು, ಪರಿಕರಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲಿರುವ ಅನುಪಯುಕ್ತ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವುದು, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಕಲ್ಪಿಸಲಾಗುವುದು. ವಿಶೇಷವಾಗಿ ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳ ಆವರಣದಲ್ಲಿ ಹರ್ಬಲ್ ಸಸಿಗಳನ್ನು ಬೆಳೆಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ರಾಮನಗರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಔಷಧಿ ಗಿಡಗಳನ್ನು ಇದೇ ವೇಳೆ ನೆಡಲಾಯಿತು.