ಬೆಂಗಳೂರು : ಆರೋಪಿಗಳ ವಿಚಾರಣೆಯ ವೇಳೆ ಅವರ ಸಾಮಾಜಿಕ ಜಾಲತಾಣ ಖಾತೆಗಳ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ತನಿಖಾ ಸಂಸ್ಥೆಗಳು ಉಳಿಸಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
ಯೂಟ್ಯೂಬ್, ಫೇಸ್ಬುಕ್ ನಂತಹ ಸಾಮಾಜಿಕ/ಡಿಜಿಟಲ್ ವೇದಿಕೆಗಳಲ್ಲಿನ ಅಂಶಗಳನ್ನು ತನಿಖೆ ಮಾಡುವಾಗ, ಅಗತ್ಯ ಬಿದ್ದರೆ ತನಿಖಾ ಸಂಸ್ಥೆಗಳು ಅಂತಹ ಆರೋಪಿಗಳ ಸಾಮಾಜಿಕ ಜಾಲತಾಣ ಖಾತೆಗಳಿಂದ ಮಾಹಿತಿಗಳನ್ನು ಡೌನ್ ಲೋಡ್ ಮಾಡಿಕೊಂಡು ಸಂಗ್ರಹಿಸಿಟ್ಟುಕೊಳ್ಳಬಹುದು. ತನಿಖೆ ಮುಗಿದ ಬಳಿಕ, ಆರೋಪಿಗಳಿಗೆ ಅವರ ಖಾತೆಯ ಲಾಗಿನ್ ಹಕ್ಕನ್ನು ಮರಳಿಸಬೇಕು ಎಂದು ಕೋರ್ಟ್ ತಿಳಿಸಿದೆ.
‘ಪವರ್ ಟಿವಿ’ ಸುದ್ದಿ ವಾಹಿನಿಯ ಸಂಪಾದಕ ಮತ್ತು ಆಡಳಿತ ನಿರ್ದೇಶಕ ರಾಕೇಶ್ ಶೆಟ್ಟಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯೊಂದಕ್ಕೆ ಸಂಬಂಧಿಸಿ, ನ್ಯಾ. ಸೂರಜ್ ಗೋವಿಂದ ರಾಜ್ ಅವರು ಈ ಅಂಶಗಳನ್ನು ಎತ್ತಿಹಿಡಿದಿದ್ದಾರೆ.
ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಸರಣಿ ವರದಿಗಳನ್ನು ಪ್ರಕಟಿಸಿದ ಬಳಿಕ, ಬೆಂಗಳೂರು ಪೊಲೀಸರು ದಾಖಲಿಸಿರುವ ಎಫ್ ಐಆರ್ ರದ್ದತಿ ಮಾಡುವಂತೆ ರಾಕೇಶ್ ಶೆಟ್ಟಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಸಿಎಂ ಕುಟುಂಬದ ವಿರುದ್ಧದ ಆರೋಪದ ವರದಿಗಳ ಬಳಿಕ, ಸುಲಿಗೆ ಪ್ರಕರಣ ದಾಖಲಿಸಿದ್ದ ಸಿಸಿಬಿ ಪೊಲೀಸರು ತಮ್ಮ ಫೇಸ್ ಬುಕ್ ಮತ್ತು ಯೂಟ್ಯೂಬ್ ಲಾಗಿನ್ ವಿವರಗಳನ್ನು ಪಡೆದಿದ್ದಾರೆ. ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅವರಿಗೆ ನೀಡಿದ ಬಳಿಕ, ಅವರು ಲಾಗಿನ್ ವಿವರಗಳನ್ನು ಬದಲಿಸಿ, ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ತಾನು ಬಳವುದಕ್ಕೆ ನಿರಾಕರಿಸಿದ್ದಾರೆ. ಪತ್ರಕರ್ತನಾಗಿ ಇದು ತಮ್ಮ ದೈನಂದಿನ ಚಟುವಟಿಕೆಗೆ ಸಮಸ್ಯೆಯಾಗಿದೆ ಎಂದು ರಾಕೇಶ್ ಶೆಟ್ಟಿ ಕೊರ್ಟ್ ಗೆ ತಿಳಿಸಿದ್ದರು.
ಏಳು ದಿನಗಳೊಳಗೆ ಹೊಸ ಲಾಗಿನ್ ವಿವರ ಖಾತೆದಾರರಿಗೆ ನೀಡುವಂತೆ ಕೋರ್ಟ್ ಸಿಸಿಬಿ ಪೊಲೀಸರಿಗೆ ನಿರ್ದೇಶಿಸಿದೆ.