ಉಡುಪಿ : ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯೊಬ್ಬರನ್ನು ರಕ್ಷಿಸಿದ ಘಟನೆ ನಗರದಲ್ಲಿ ನಡೆದಿದೆ.
ಕೋಲಾರ ನಿವಾಸಿ ಅಣ್ಣಪ್ಪಯ್ಯ (76) ಎಂಬವರು ಕರಾವಳಿ ಬೈಪಾಸ್ ಬಳಿ ಅನುಮಾನಾಸ್ಪದವಾಗಿ ಸುಳಿದಾಡುತ್ತಿರುವುದನ್ನು ಗಮನಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅವರು ಹಿರಿಯ ನಾಗರಿಕರ ಸಹಾಯವಾಣಿಯ ಸಿಬ್ಬಂದಿಗಳ ಸಹಾಯದಿಂದ ರಕ್ಷಿಸಿ, ಕುಟುಂಬದ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಮಾಜ ಸೇವಕ ವಿಶು ಶೆಟ್ಟಿ ಅಣ್ಣಪ್ಪಯ್ಯ ಅವರನ್ನು ಮೊದಲು ವಿಚಾರಿಸಿದಾಗ ಅಸ್ಪಷ್ಟ ಉತ್ತರ ನೀಡಿದ್ದರು. ಅನುಮಾನಗೊಂಡ ಅವರು ಕೂಡಲೇ ಉಡುಪಿಯ ಹಿರಿಯ ನಾಗರಿಕ ಸಹಾಯವಾಣಿಯ ಗಮನಕ್ಕೆ ತಂದರು. ಕೂಡಲೇ ಸ್ಪಂದಿಸಿದ ಸಹಾಯವಾಣಿಯ ಸಿಬ್ಬಂದಿಗಳು, ವ್ಯಕ್ತಿಯನ್ನು ವಿಶು ಶೆಟ್ಟಿ ಅವರ ವಾಹನದಲ್ಲಿ ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.
ಆಶ್ರಮದ ಆರೈಕೆಯಿಂದ ಸಾಂತ್ವನಗೊಂಡ ಬಳಿಕ ಅಣ್ಣಪ್ಪಯ್ಯ ಅವರು ತಾವು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ನಡೆಸಲು ಮುಂದಾಗಿರುವ ವಿಷಯವನ್ನು ತಿಳಿಸಿದ್ದಾರೆ. ಕೊನೆಗೆ ಅವರಿಂದ ಮಗನ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಮಾಹಿತಿ ನೀಡಿದಾಗ ತನ್ನ ತಂದೆ ಕಾಶಿಯಾತ್ರೆಗೆ ಹೋಗಿದ್ದಾರೆ ಎಂದು ಮಗ ಉತ್ತರಿಸಿದ್ದ.
ಆದರೆ ವಿಷಯದ ಗಂಭೀರತೆಯನ್ನು ಅರಿತ ಮಗ ಉಡುಪಿಗೆ ಬಂದು ತಂದೆಯನ್ನು ಊರಿಗೆ ಕರೆದುಕೊಂಡು ಹೋಗಿದ್ದಾನೆ.