Home ಟಾಪ್ ಸುದ್ದಿಗಳು ಸಾಮಾಜಿಕ ಧುರೀಣ ಮುಮ್ತಾಝ್ ಅಲಿ ನಿಧನ; ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಆಗಲಿ: SDPI

ಸಾಮಾಜಿಕ ಧುರೀಣ ಮುಮ್ತಾಝ್ ಅಲಿ ನಿಧನ; ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಆಗಲಿ: SDPI

ಮಂಗಳೂರು: ಜಿಲ್ಲೆಯ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಧುರೀಣರಾದ ಮಾಜಿ ಶಾಸಕ ಮೊಯ್ದಿನ್ ಬಾವಾ, ಮಾಜಿ ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್ ಅವರ ಸಹೋದರ ಬಿ ಎಂ ಮುಮ್ತಾಝ್ ಅಲಿ ಅವರ ಸಾವಿನ ಬಗ್ಗೆ ಉನ್ನತ ಮಟ್ಟದ ಪೋಲಿಸ್ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆದು ಸಾವಿನ ಹಿಂದಿರುವ ಷಡ್ಯಂತರ ಬಯಲಾಗಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಮುಮ್ತಾಝ್ ಅಲಿ ರವರ ಸಾವು ಸಂಶಯಾಸ್ಪದವಾಗಿದೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿತ್ವ ಅಲ್ಲ. ಆದಿತ್ಯವಾರ ಮುಂಜಾನೆಯ 3ಗಂಟೆಯ ಸುಮಾರಿಗೆ ಮನೆಯಿಂದ ಹೊರ ಬಂದ ಮುಮ್ತಾಝ್ ಅಲಿ ಅವರ ಕಾರು ಕೂಳೂರು ಫಲ್ಗುಣಿ ನದಿ ಸೇತುವೆ ಬಳಿ ಅಪಘಾತವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹನಿಟ್ರಾಪ್ ಮೂಲಕ ಮುಮ್ತಾಝ್ ಅಲಿ ಅವರನ್ನು ಸಿಲುಕಿಸಿ ಹಣ ದೋಚುವ ಗ್ಯಾಂಗ್‌ನ ಬಗ್ಗೆ ಆರೋಪ ಕೇಳಿ ಬರುತ್ತಿರುವಾಗಲೇ ಕಾಂಗ್ರೆಸ್ ನಾಯಕ, ವಕ್ಫ್ ಬೋರ್ಡ್ ಜಿಲ್ಲಾ ಸಮಿತಿ ಸದಸ್ಯ, ಸೇರಿದಂತೆ 6 ಮಂದಿಯನ್ನು ಪೋಲಿಸ್ ಇಲಾಖೆ ವಶಕ್ಕೆ ಪಡೆದು ಪ್ರಾಥಮಿಕ ತನಿಖೆ ನಡೆಸಿದೆ. ಜಿಲ್ಲೆಯಲ್ಲಿ ಪ್ರಭಾವಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿಕೊಂಡು ಹನಿಟ್ರಾಪ್ ಮಾಡುವ ಜಾಲಗಳು ಸಕ್ರಿಯವಾಗಿದ್ದರೂ ಸಹ ಪೋಲಿಸ್ ಇಲಾಖೆ ಮತ್ತು ಆಡಳಿತ ವರ್ಗವು ಅವರನ್ನು ಹತ್ತಿಕ್ಕಲು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ

ಬೆಳಗ್ಗಿನ ಜಾವ 3ಗಂಟೆಯ ಹೊತ್ತಿಗೆ ಮನೆಯಿಂದ ಹೊರಬರಲು ಕಾರಣವೇನು? 3.30ಗಂಟೆ ಸುಮಾರಿಗೆ ಕುಟುಂಬಸ್ಥರಿಗೆ ಕಳುಹಿಸಿದ್ದರೆನ್ನಲಾದ ಕೊನೆಯ ಸಂದೇಶ ಅವರೇ ಕಳುಹಿಸಿದ್ದಾರ  ಅಥವಾ ಅವರನ್ನು ಬಲವಂತವಾಗಿ ಅಪಹರಣ ಮಾಡಿ ತನಿಖೆಯ ದಿಕ್ಕು ತಪ್ಪಿಸುವ ದುರುದ್ದೇಶದಿಂದ ಬೇರೆ ಯಾರಾದರೂ ಮಾಡಿದ್ದಾರ ಎಂಬದರ ಬಗ್ಗೆಯೂ ತನಿಖೆಯಾಗಬೇಕು. ಮುಮ್ತಾಜ್ ಅವರ ಐಶಾರಾಮಿ ಕಾರು ಖಾಸಗಿ ಬಸ್‌ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರು ಅದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಒಂದು ವೇಳೆ ಡಿಕ್ಕಿ ಹೊಡೆದದ್ದು ಹೌದು ಎಂದಾದರೆ  ಬಸ್‌ ನವರು ಯಾಕಾಗಿ ಪೋಲಿಸರಿಗೆ ಮಾಹಿತಿ ನೀಡಲಿಲ್ಲ? ಅಥವಾ ಅವರನ್ನು ವ್ಯವಸ್ಥಿತವಾಗಿ ಹತ್ಯೆಗೈದು ನದಿಗೆ ಎಸೆಯಲಾಯಿತೇ? ಅಥವಾ ಮಾನಸಿಕ ಹಿಂಸೆ, ಒತ್ತಡದ ಮೂಲಕ ನದಿಗೆ ಹಾರುವಂತೆ ಮಾಡಲಾಯಿತೇ? ಇಂತಹ ಹಲವಾರು ಸಂಶಯಗಳು ಜನರೆಡೆಯಲ್ಲಿ ಹರಿದಾಡುತ್ತಿದೆ‌.

 ಈ ಹಿಂದೆಯೂ ಹಲವು ಹನಿಟ್ರಾಪ್ ದಂಧೆ, ಡ್ರಗ್ಸ್ ದಂಧೆ ನಡೆದು ಬಂಧನಕ್ಕೊಳಗಾದವರನ್ನು ವಾರದೊಳಗೆ ಬಿಡುಗಡೆ ಮಾಡಿಸುತ್ತಿದ್ದವರು ಯಾರು? ಇಂತಹ ಜಾಲಗಳಿಗೆ ಬೆಂಬಲ ನೀಡುವವರು ಯಾರು ಇಂತಹ ಹತ್ತು ಹಲವು ಪ್ರಶ್ನೆಗಳ ಮೂಲಕ ನಾಗರಿಕ ಸಮಾಜ ಆತಂಕಕ್ಕೀಡಾಗಿದೆ. ಹಾಗಾಗಿ ಈ ಪ್ರಕರಣವನ್ನು ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಇದರ ಹಿಂದಿರುವ ಎಲ್ಲಾ ಜಾಲಗಳನ್ನು ಸದೆಬಡಿಯಬೇಕು. ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹನಿಟ್ರಾಪ್ ಹಾಗೂ ಬ್ಲಾಕ್ ಮೇಲ್ ಮಾಡುವವರನ್ನು ಸದೆಬಡಿಯಲು ಪ್ರಸ್ತುತ ಕಠಿಣ ಕಾಯಿದೆಗಳು ಇಲ್ಲ. ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹನಿಟ್ರಾಪ್ ಮಾಡುವವರ ವಿರುದ್ಧ ಪ್ರತ್ಯೇಕ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಅನ್ವರ್ ಸಾದತ್  ಪತ್ರಿಕಾ ಪ್ರಕಟಣೆಯಲ್ಲಿ  ಒತ್ತಾಯಿಸಿದ್ದಾರೆ.

Join Whatsapp
Exit mobile version