Home ಜಾಲತಾಣದಿಂದ ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಹಾವು ಪತ್ತೆ; ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಹಾವು ಪತ್ತೆ; ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಪಾಟ್ನಾ: ಬಿಹಾರದಲ್ಲಿ ಶನಿವಾರ ಸರ್ಕಾರಿ ಶಾಲೆಯೊಂದರ ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತಿರುವ ಹಾವೊಂದು ಕಂಡುಬಂದಿದೆ. ಊಟ ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರಾರಿಯಾ ಜಿಲ್ಲೆಯ ಫೋರ್ಬೆಸ್‌ಗಂಜ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಈ ಘಟನೆ ವರದಿಯಾಗಿದೆ. ಕೆಲ ವಿದ್ಯಾರ್ಥಿಗಳು ಆಹಾರವನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆ. ತಕ್ಷಣ ಚಿಕಿತ್ಸೆಗಾಗಿ ಫೋರ್ಬ್ಸ್‌ಗಂಜ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮಧ್ಯಾಹ್ನದ ಊಟದ ಸಮಯದಲ್ಲಿ ಎನ್‌ಜಿಒ ಸಿದ್ಧಪಡಿಸಿದ ಖಿಚಡಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವ ವೇಳೆ ಪ್ಲೇಟ್‌ನಲ್ಲಿ ಹಾವು ಕಂಡುಬಂದಿದೆ. ಘಟನೆ ವರದಿಯಾದ ನಂತರ ಶಾಲೆಯಲ್ಲಿ ಊಟದ ವಿತರಣೆಯನ್ನು ನಿಲ್ಲಿಸಲಾಯಿತು. ಆದರೆ ಅದಾಗಲೇ ಆಹಾರ ಸೇವಿಸಿದ್ದ ವಿದ್ಯಾರ್ಥಿಗಳಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಫೋರ್ಬ್ಸ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಎಸ್‌ಡಿಎಂ, ಎಸ್‌ಡಿಒ ಮತ್ತು ಡಿಎಸ್‌ಪಿ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿದ್ದಾರೆ. ಇದೀಗ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ. ಊಟ ತಿಂದು 100ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ಹದಗೆಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದರೆ, 25 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವರದಿಯಾದ ನಂತರ, ಗ್ರಾಮಸ್ಥರು ಮತ್ತು ಮಕ್ಕಳ ಪೋಷಕರು ಶಾಲೆಗೆ ಆಗಮಿಸಿ ಗಲಾಟೆ ಮಾಡಲು ಪ್ರಾರಂಭಿಸಿದ್ದು, ಕೆಲವರು ಶಾಲೆಯ ಮುಖ್ಯೋಪಾಧ್ಯಾಯರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಡಿಒ ಸುರೇಂದ್ರ ಅಲ್ಬೇಲ ತಿಳಿಸಿದ್ದಾರೆ.

Join Whatsapp
Exit mobile version