Home ಕರಾವಳಿ ಸ್ಮಾರ್ಟ್ ಸಿಟಿಯಾಗುವ ಬದಲು ಕಲುಷಿತ ನಗರವಾದ ಮಂಗಳೂರು : ಹೈಕೋರ್ಟ್ ತರಾಟೆ

ಸ್ಮಾರ್ಟ್ ಸಿಟಿಯಾಗುವ ಬದಲು ಕಲುಷಿತ ನಗರವಾದ ಮಂಗಳೂರು : ಹೈಕೋರ್ಟ್ ತರಾಟೆ

ಬೆಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯು ಮಂಗಳೂರನ್ನು ಸ್ಮಾರ್ಟ್ ನಗರ ಮಾಡುವ ಬದಲು ಕಲುಷಿತ ನಗರವನ್ನಾಗಿ ಮಾಡುತ್ತಿದೆ ಎಂದು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಘನ ತ್ಯಾಜ್ಯಕ್ಕಿಂತ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಮೂಲಕ ಹರಡುತ್ತಿರುವ ತ್ಯಾಜ್ಯ ಹೆಚ್ಚಾಗಿದೆ ಎಂಬ ಆರೋಪದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತೃಪ್ತಿದಾಯಕ ವಿವರಣೆ ಸಲ್ಲಿಸದಿದ್ದರೆ ಯೋಜನೆಯ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸುವಂತೆ ಆದೇಶಿಸಲಾಗುವುದು ಎಂದು ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಲಿಮಿಟೆಡ್ ಗೆ ನ್ಯಾಯಪೀಠ ಎಚ್ಚರಿಕೆ ನೀಡಿದೆ.

ಮಂಗಳೂರಿನ ಪಚ್ಚನಾಡಿಯಲ್ಲಿ ಸಂಭವಿಸಿದ ಭೂಕುಸಿತ ದುರಂತದಿಂದ ಹಾನಿಗೊಳಗಾದ ವ್ಯಕ್ತಿಗಳಿಗೆ ಗೃಹ ಮಂಡಳಿ ಕಟ್ಟಡದಲ್ಲಿ ವಸತಿ ಕಲ್ಪಿಸಲಾಗಿದೆ ಎಂದು ಸರಕಾರ ಮತ್ತು ಪಾಲಿಕೆ ವರದಿ ಸಲ್ಲಿಸಿತ್ತು. ದುರಂತ ಪ್ರದೇಶದಲ್ಲಿ ಕುಡಿಯುವ ನೀರಿನ ಸೌಕರ್ಯವಿಲ್ಲ. ಆದ್ದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದನ್ನು ಖಚಿತಪಡಿಸಬೇಕು ಎಂದು ಕೋರ್ಟ್ ತಿಳಿಸಿದೆ.

ಪರಿಸರ ಕಲುಷಿತವಾಗುವುದನ್ನು ತಡೆಯದ ಅಧಿಕಾರಿ ವಿರುದ್ಧ ಪರಿಸರ ಸಂರಕ್ಷಣೆ ಕಾಯ್ದೆಯಡಿ ವಿಚಾರಣೆ ನಡೆಸುವಂತೆ ಕೋರ್ಟ್ ಮಹಾನಗರ ಪಾಲಿಕೆಗೆ ಆದೇಶಿಸಿದೆ.

Join Whatsapp
Exit mobile version