ಮುಸ್ಲಿಮ್ ವಿದ್ಯಾರ್ಥಿಗೆ ಕಪಾಳ ಮೋಕ್ಷ ಪ್ರಕರಣ: ಸುಪ್ರೀಂ ಕೋರ್ಟ್ ವಿಷಾದ

Prasthutha|

►‘ಶಿಕ್ಷಕಿ ನೀಡಿರುವುದು ಹೀನಾಯವಾದ ದೈಹಿಕ ಶಿಕ್ಷೆ’

- Advertisement -

ಹೊಸದಿಲ್ಲಿ: ಉತ್ತರಪ್ರದೇಶದ ಮುಜಫ್ಫರನಗರದ ಶಾಲೆಯೊಂದರಲ್ಲಿ ಶಿಕ್ಷಕಿಯು ಮುಸ್ಲಿಂ ವಿದ್ಯಾರ್ಥಿಯೊಬ್ಬನ ಕೆನ್ನೆಗೆ ಸಹಪಾಠಿಗಳಿಂದ ಹೊಡೆಸಿದ ಮತ್ತು ಕೋಮುವಿರೋಧಿ ಹೇಳಿಕೆ ನೀಡಿದ್ದ ಪ್ರಕರಣದ ಕುರಿತು ವಿಷಾದ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಶಾಲೆಗಳಲ್ಲಿ ನೀಡಲಾಗುತ್ತಿರುವ ಶಿಕ್ಷಣದ ಗುಣಮಟ್ಟ ಕುರಿತು ಪ್ರಶ್ನೆ ಎತ್ತಿದೆ.

ಈ ಪ್ರಕರಣದ ತನಿಖೆಯ ಮೇಲ್ವಿಚಾರಣೆ ವಹಿಸಲು ಹಿರಿಯ ಐಪಿಎಸ್‌ ಅಧಿಕಾರಿಯನ್ನು ನೇಮಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.

- Advertisement -

ನ್ಯಾಯಮೂರ್ತಿಗಳಾದ ಅಭಯ್‌ ಎಸ್‌. ಓಕಾ ಮತ್ತು ಪಂಕಜ್‌ ಮಿತ್ತಲ್‌ ಅವರಿದ್ದ ನ್ಯಾಯಪೀಠವು ಈ ಪ್ರಕರಣದ ವಿಚಾರಣೆ ನಡೆಸಿದೆ. ‘ಶಿಕ್ಷಣದ ಹಕ್ಕು ಕಾಯ್ದೆಯ ಕಡ್ಡಾಯ ಜಾರಿ ಮತ್ತು ಮಕ್ಕಳ ಮೇಲೆ ದೈಹಿಕ ಅಥವಾ ಮಾನಸಿಕ ದೌರ್ಜನ್ಯ ನಡೆಸುವುದನ್ನು ನಿಷೇಧಿಸುವ ನೀತಿಗಳಿಗೆ ರಾಜ್ಯ ಸರ್ಕಾರವು ಬದ್ಧವಾಗಿಲ್ಲ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಜೊತೆಗೆ, ಧರ್ಮ ಮತ್ತು ಜಾತಿ ಆಧಾರದಲ್ಲಿ ಮಕ್ಕಳ ವಿರುದ್ಧ ತಾರತಮ್ಯ ನೀತಿ ಅನುಸರಿಸುವಂತಿಲ್ಲ ಎಂಬ ನೀತಿಯನ್ನೂ ಪಾಲಿಸುತ್ತಿಲ್ಲ ಎಂದು ನ್ಯಾಯಪೀಠ ಹೇಳಿದೆ.

‘ಶಿಕ್ಷಕಿ ನೀಡಿರುವುದು ಹೀನಾಯವಾದ ದೈಹಿಕ ಶಿಕ್ಷೆ’ ಎಂದಿರುವ ನ್ಯಾಯಪೀಠ, ‘ಶಿಕ್ಷಣದ ಗುಣಮಟ್ಟವು ಸೂಕ್ಷ್ಮ ಸಂವೇದನೆಯನ್ನೂ ಒಳಗೊಂಡಿರುತ್ತದೆ. ಮುಜಫ್ಫರನಗರದ ಶಾಲೆಯೊಂದರಲ್ಲಿ ನಡೆದಿರುವ ಕೃತ್ಯವು ರಾಜ್ಯದ ಅಂತಃಸಾಕ್ಷಿಯನ್ನು ಕಲಕುವಂತಿದೆ’ ಎಂದಿದೆ.



Join Whatsapp