Home ಟಾಪ್ ಸುದ್ದಿಗಳು ಶೀಘ್ರದಲ್ಲಿ ಆರನೇ ಗ್ಯಾರಂಟಿ ನಿಶ್ಚಿತ: ಪ್ರಿಯಾಂಕ್ ಖರ್ಗೆ

ಶೀಘ್ರದಲ್ಲಿ ಆರನೇ ಗ್ಯಾರಂಟಿ ನಿಶ್ಚಿತ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಬಿಜೆಪಿ ಸರ್ಕಾರದಲ್ಲಿ ಯಾರೆಲ್ಲ ಭ್ರಷ್ಟಾಚಾರದಲ್ಲಿ ಮುಳುಗಿದ್ದರೋ ಅವರ ಮೇಲೆ ಸಂವಿಧಾನದ ಅಡಿಯಲ್ಲಿ, ಕಾನೂನು ಬದ್ಧವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರನೇ ಗ್ಯಾರಂಟಿ ನೀಡಿದ್ದೆ. ಅದರಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾರೆಲ್ಲಾ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದರೋ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರನೇ ಗ್ಯಾರಂಟಿ ನೀಡಿದ್ದೆ. ಅದರಂತೆ ಕಳೆದ ಬಿಜೆಪಿ ಸರ್ಕಾರದಲ್ಲಿ ಯಾರೆಲ್ಲ ಭ್ರಷ್ಟಾಚಾರದಲ್ಲಿ ಮುಳುಗಿದ್ದರೋ ಅವರ ಮೇಲೆ ಸಂವಿಧಾನದ ಅಡಿಯಲ್ಲಿ, ಕಾನೂನು ಬದ್ಧವಾಗಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಕೆಕೆಆರ್ಡಿಬಿ ಅನುದಾನದಲ್ಲಿ ಖಾಸಗಿ ಪ್ರವಾಸ ಕೈಗೊಂಡವರ ಬಗ್ಗೆ 2022 ರ ಡಿಸೆಂಬರ್ 12 ರಂದು ಹಿಂದಿನ ಸರ್ಕಾರಕ್ಕೆ ಪತ್ರ ಬರೆದು ತನಿಖೆ ನಡೆಸಲು ಆಗ್ರಹಿಸಲಾಗಿತ್ತು. ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ 431 ಕೋಟಿ ಅವ್ಯವಹಾರದ ಬಗ್ಗೆ 2022ರ ಜೂನ್ 1 ರಂದು ಪತ್ರ ಬರೆಯಲಾಗಿತ್ತು. ನೂತನ ಸರ್ಕಾರ ಬಂದ ನಂತರ ಹಿಂದಿನ ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರಗಳನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದ ನಂತರ ತಕ್ಷಣ ತನಿಖೆಗೆ ಆದೇಶ ನೀಡಿರುವುದು ಸ್ವಾಗತಾರ್ಹ ಎಂದು ಬರೆದಿದ್ದಾರೆ. ಅಲ್ಲದೇ ಭ್ರಷ್ಟಾಚಾರದಲ್ಲಿ ಯಾರೇ ಮುಳುಗಿದ್ದರು ಸಹ ನಮ್ಮ ಕಾಂಗ್ರೆಸ್ ಸರ್ಕಾರವು ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

Join Whatsapp
Exit mobile version