Home ಟಾಪ್ ಸುದ್ದಿಗಳು ಆರು ಮಂದಿ ಸೇರಿ ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ: ರಾಹುಲ್ ಗಾಂಧಿ

ಆರು ಮಂದಿ ಸೇರಿ ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ: ರಾಹುಲ್ ಗಾಂಧಿ

ನವದೆಹಲಿ: ದೇಶವನ್ನು ಆರು ಮಂದಿ ಸೇರಿ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಲೋಕಸಭೆ ಅಧಿವೇಶನದಲ್ಲಿ ನಡೆಯುತ್ತಿರುವ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಮಾತನಾಡಿದ್ದಾರೆ. ಚಕ್ರವ್ಯೂಹದ ಮೂಲಕ ಭಯವನ್ನು ಹಬ್ಬಿಸಿ, ರೈತರು, ಕಾರ್ಮಿಕರು ಸೇರಿ ಎಲ್ಲರೂ ಅದರೊಳಗೆ ಸಿಲುಕಿಕೊಳ್ಳುವ ಹಾಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಸಾವಿರಾರು ವರ್ಷಗಳ ಹಿಂದೆ ಹರಿಯಾಣದ ಕುರುಕ್ಷೇತ್ರದಲ್ಲಿ ಆರು ಮಂದಿ ಸೇರಿ ಅಭಿಮನ್ಯು ಎನ್ನುವ ಯುವಕನ್ನು ಕೊಲೆ ಮಾಡಿದರು. ಚಕ್ರವ್ಯೂಹ ಎಂದರೆ ಭಯ ಹಾಗೂ ಹಿಂಸೆ. ಅದರೊಳಗೆ ಸಿಲುಕಿಸಿ ಅಭಿಮನ್ಯುವನ್ನು ಕೊಂದು ಹಾಕಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.


ಅಂದು ಆರು ಮಂದಿ ಸೇರಿ ಚಕ್ರವ್ಯೂಹ ರಚಿಸಿ ಅಭಿಮನ್ಯುವನ್ನು ಕೊಲೆ ಮಾಡಿದರು. ಇಂದು ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಉದ್ಯಮಪತಿಗಳಾದ ಅಂಬಾನಿ ಹಾಗೂ ಅದಾನಿ ಸೇರಿ ಚಕ್ರವ್ಯೂಹ ರಚಿಸಿಕೊಂಡಿದ್ದಾರೆ’ ಎಂದು ಟೀಕಿಸಿದ್ದಾರೆ.
ಬಿಜೆಪಿಯ ಚಿಹ್ನೆಯನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶ ಈಗ ಕಮಲದ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಮಲದ ಚಿಹ್ನೆಯನ್ನು ಪ್ರಮುಖವಾಗಿ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದ ಅವರು 21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹವನ್ನು ರಚಿಸಲಾಗಿದೆ ಎಂದು ಹೇಳಿದರು. ‘ಈ ಬಜೆಟ್, ಚಕ್ರವ್ಯೂಹವನ್ನು ದುರ್ಬಲಗೊಳಿಸಿ, ರೈತರಿಗೆ, ಕಾರ್ಮಿಕರಿಗೆ ಹಾಗೂ ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆಗಳಿಗೆ ಸಹಾಯಕವಾಗಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಏಕಸ್ವಾಮ್ಯ ವ್ಯಾಪಾರ, ರಾಜಕೀಯ ಏಕಸ್ವಾಮ್ಯ ಮತ್ತು ಏಜೆನ್ಸಿಗಳ ಚೌಕಟ್ಟನ್ನು ಬಲಪಡಿಸುವುದು ಮಾತ್ರ ಈ ಬಜೆಟ್ನ ಗುರಿಯಾಗಿದೆ ಎಂದು ಟೀಕಿಸಿದ್ದಾರೆ.

Join Whatsapp
Exit mobile version