ಬೆಂಗಳೂರು: ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಬಂಧಿಸಿರುವ ಹೆಬ್ಬಾಳ ಪೊಲೀಸರು 1 ನಾಡ ಪಿಸ್ತೂಲ್ ಹಾಗೂ 6 ಜೀವಂತ ಗುಂಡುಗಳ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಬ್ಬಾಳದ ಪಿಳ್ಳೇಕಮ್ಮ ದೇವಸ್ಥಾನದ ರೈಲ್ವೆ ಹಳಿಯ ಹತ್ತಿರ ಪೊಲೀಸರು ಗಸ್ತು ತಿರುಗುವಾಗ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಗಳ ಪೈಕಿ ಒಬ್ಬನ ಕೈ ಚೀಲವನ್ನು ತಪಾಸಣೆ ನಡೆಸಲು ಹೋದಾಗ ಎಲ್ಲರೂ ಓಡಲು ಪ್ರಾರಂಭಿಸಿದ್ದರು. ಅವರನ್ನು ಬೆನ್ನಟ್ಟಿ ಹಿಡಿದಾಗ ಕೈ ಚೀಲದಲ್ಲಿ ಒಂದು ಪಿಸ್ತೂಲ್ ಹಾಗೂ 6 ಜೀವಂತ ಗುಂಡುಗಳು ಕಂಡು ಬಂದಿದ್ದು, ಅವುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಬಿಹಾರ ಮೂಲದವರಾಗಿದ್ದು, ಕೆಲಸ ಹುಡುಕಿಕೊಂಡು ನಗರಕ್ಕೆ ಬರುವಾಗ ತಮ್ಮ ಊರಿನಿಂದ ನಾಡ ಪಿಸ್ತೂಲ್ ಹಾಗೂ ಗುಂಡುಗಳನ್ನು ಜೊತೆಯಲ್ಲಿ ತಂದಿದ್ದರು. ನಗರದಲ್ಲಿ ಯಾರಿಗಾದರೂ ಮಾರಾಟ ಮಾಡಿ ಸುಲಭವಾಗಿ ಹಣಗಳಿಸಲು ಮುಂದಾಗಿರುವುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಹೆಬ್ಬಾಳ ಪೊಲೀಸ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬ ಬಾಲಕನನ್ನು ಬಾಲ ಮಂದಿರಕ್ಕೊಪ್ಪಿಸಲಾಗಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.