ತಿರುವನಂತಪುರಂ: ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕನಿಷ್ಠ ಆರು ಜನ ಸಾವನ್ನಪ್ಪಿದ್ದಾರೆ ಎಂದು ಮುಖಮಂತ್ರಿ ಪಿಣರಾಯಿ ವಿಜಯನ್ ಖಚಿತಪಡಿಸಿದ್ದಾರೆ.
ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲು ರಾಜ್ಯವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಭರವಸೆ ನೀಡಿದರು.
ಇತ್ತೀಚೆಗೆ ದಿನಗಳಲ್ಲಿ ನಡೆದ ಪ್ರವಾಹದ ಅನುಭವಗಳ ಆಧಾರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರವಾಹ ಮತ್ತು ಭೂಕುಸಿತದಲ್ಲಿ ಸಂತ್ರಸ್ತರಾಗುವ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗುವುದು. ಸಂತ್ರಸ್ತರು ಅಂತಹ ಕೇಂದ್ರಗಳಿಗೆ ಸ್ವಇಚ್ಛೆಯಿಂದ ಹೋಗುವಂತೆ ಮುಖ್ಯಮಂತ್ರಿ ಮನವಿ ಮಾಡಿದರು.
ಈ ಮಧ್ಯೆ ನಿರಂತರ ಮಳೆಯ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಮಂಗಳವಾರ ಏಳು ಜಿಲ್ಲೆಗಳಾದ ತಿರುವನಂತಪುರಂ, ಪತ್ತನಂತಿಟ್ಟ, ಎರ್ನಾಕುಳಂ, ಇಡುಕ್ಕಿ, ಆಲಪ್ಪುಝ, ಕೊಲ್ಲಂ ಮತ್ತು ಕೋಟ್ಟಯಂ ನ ಶಿಕ್ಷಣ ಸಂಸ್ಥೆಗಳಿಗೆ ಈಗಾಗಲೇ ರಜೆ ಘೋಷಿಸಿದೆ.