ಬರಾಬಂಕಿ: ಏಳು ವರ್ಷಗಳ ಬಿಜೆಪಿ ಅಧಿಕಾರಾವಧಿಯಲ್ಲಿ ಭಾರತವನ್ನು ಹಿಂದುತ್ವ ರಾಷ್ಟ್ರವನ್ನಾಗಿ ಪರಿವರ್ತಿಸುವ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಿಂದುತ್ವ ಅಜೆಂಡಾವನ್ನು ಅನುಷ್ಠಾನಗೊಳಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಉವೈಸಿ ಅವರು ಪ್ರಧಾನಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಮುಂಬರುವ ಯುಪಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು 100 ಸ್ಥಾನಗಳಲ್ಲಿ ಸ್ಪರ್ಧಿಸುವ ಗುರಿಯೊಂದಿಗೆ ರಾಜ್ಯ ಪ್ರವಾಸದಲ್ಲಿರುವ ಉವೈಸಿ 2014 ರಿಂದ ದಲಿತ ಮತ್ತು ಮುಸ್ಲಿಮರನ್ನು ಗುಂಪು ಹತ್ಯೆಗಳ ಮೂಲಕ ದೌರ್ಜನ್ಯವೆಸಗಲಾಗುತ್ತಿದೆ ಎಂದು ಆರೋಪಿಸಿದರು. 2015 ರಲ್ಲಿ ಗೋಹತ್ಯೆ ನೆಪದಲ್ಲಿ ಮುಹಮ್ಮದ್ ಅಖ್ಲಾಕ್ ರವರ ಹತ್ಯೆಯನ್ನು ಉಲ್ಲೇಖಿಸಿ ಅವರು ಮಾತನಾಡಿದರು.
ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಎಐಎಂಐಎಂ ನಾಯಕ ಉವೈಸಿ, ಮುಸ್ಲಿಮ್ ಮತಗಳನ್ನು ಗುರಿಯಾಗಿಸಿ ಮತಬೇಟೆ ನಡೆಸುತ್ತದೆ. ಆದರೆ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿ ಮತ್ತು ದೌರ್ಜನ್ಯ ನಡೆದಾಗ ಮೌನವಹಿಸುವುದು ಖೇದಕರ ಎಂದು ಅವರು ಹೇಳಿದರು.
ಮೋದಿ ಪ್ರಧಾನಿಯಾದ ದಿನದಿಂದ ಜಾತ್ಯತೀತತೆಯನ್ನು ಕೆಡವಿ ಭಾರತವನ್ನು ಹಿಂದುತ್ವ ರಾಷ್ಟ್ರವನ್ನಾಗಿ ಪರಿವರ್ತಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಎಐಎಂಐಎಂ ವತಿಯಿಂದ ಆಯೋಜಿಸಿದ ಜಾಥಾಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಮ್ ಮಹಿಳೆಯರು ಮತ್ತು ತ್ರಿವಳಿ ತಲಾಖ್ ಕುರಿತು ಮಾತನಾಡುವ ಮೋದಿ ಸರ್ಕಾರ, ಆರೆಸ್ಸೆಸ್ ಹಿಂದುತ್ವವಾದಿಗಳಿಂದ ಅನ್ಯಾಯಕ್ಕೊಳಗಾದ ಮಹಿಳೆಯರ ಬಗ್ಗೆ ಧ್ವನಿಯೆತ್ತಲಿ ಎಂದು ಗುಡುಗಿದರು. ಪ್ರಧಾನಿ ಮೋದಿಯಿಂದ ಅವರ ಪತ್ನಿ ಜಶೋದಾ ಬೆನ್ ಅವರಿಗೆ ಅನ್ಯಾಯವಾಗಿದೆ ಎಂದು ಪ್ರಧಾನಿ ಮೋದಿಗೆ ಚಾಟಿ ಬೀಸಿದರು. ಮಾತ್ರವಲ್ಲ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಯಾಕೆ ಮಾತನಾಡುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.