ನವದೆಹಲಿ : 1947ರಲ್ಲಿ ದೇಶ ವಿಭಜನೆ ಸಂದರ್ಭ ಸಂಭವಿಸಿದ್ದ ಕೋಮು ಗಲಭೆಯ ಬಳಿಕ ಮುಚ್ಚಲ್ಪಟ್ಟಿದ್ದ 550 ವರ್ಷ ಹಳೆಯ ಮಸೀದಿಯೊಂದನ್ನು ಸಿಖ್ ಸಮುದಾಯದ ಜನರ ಸಹಾಯದೊಂದಿಗೆ ಮುಸ್ಲಿಮರ ಪ್ರಾರ್ಥನೆಗೆ ಒದಗಿಸಲಾಗಿದೆ.
ಸಿಖ್ ಸಂಪ್ರದಾಯದ ಪ್ರಕಾರ ಸಿಖ್ಖ್ ಧರ್ಮ ಸಂಸ್ಥಾಪಕರಾದ ಗುರುನಾನಕರು, ಪಂಜಾಬ್ ನ ಕಪುರ್ತಲಾ ಜಿಲ್ಲೆಯ ಸುಲ್ತಾನ್ ಪುರ ಲೋಧಿಯ ಕೋಟೆಯೊಳಗಿನ ಮಸೀದಿಯಲ್ಲಿ ನಮಾಝ್ ಸಲ್ಲಿಸಿದ್ದರು.
ನ.13ರಂದು ಪ್ರದೇಶದ ಸಿಖ್ಖರು ಮತ್ತು ಮುಸ್ಲಿಮರು ಜಂಟಿ ಕಾರ್ಯಕ್ರಮ ಆಯೋಜಿಸಿ ಮಸೀದಿಗೆ ಮರು ಚಾಲನೆ ನೀಡಿದ್ದಾರೆ. ಸಿಖ್ಖರು ಮುಸ್ಲಿಂ ಬಾಂಧವರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ಕಾರ್ಯಕ್ರಮದ ಬಳಿಕ ಮುಸ್ಲಿಮರು ಧನ್ಯವಾದ ಸಲ್ಲಿಸುವ ಪ್ರಾರ್ಥನೆ ಸಂಪ್ರದಾಯ ನಿರ್ವಹಿಸಿದರು. ಮಲೇರ್ ಕೋಟ್ಲದ ಸಿಖ್ಖರು ಮತ್ತು ಮುಸ್ಲಿಮರು ಸುಲ್ತಾನ್ ಪುರಕ್ಕೆ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಸೀದಿ ಮರು ತೆರೆಯುವ ಪ್ರಕ್ರಿಯೆಯಲ್ಲಿ ಸಿಖ್ ಸಮುದಾಯದ ಸಂತ ಸುಖದೇವ್ ಸಿಂಗ್ ಮತ್ತು ಸಂತ ಬಲಬೀರ್ ಸಿಂಗ್ ಮುಂಚೂಣಿಯಲ್ಲಿದ್ದರು. ಬಲಬೀರ್ ಸಿಂಗ್ ಪ್ರದೇಶದಲ್ಲಿ ಪರಿಸರ ಸಂಬಂಧಿ ಚಟುವಟಿಕೆಗಳಿಗೆ ಪ್ರಖ್ಯಾತರಾದವರು.
ಪಂಜಾಬ್ ಜಮಾತೆ ಇಸ್ಲಾಮಿ ಹಿಂದ್ ಮುಖ್ಯಸ್ಥ ಅಬ್ದುಲ್ ಶಕೂರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಗುರು ನಾನಕರ ಜೀವನ ಮತ್ತು ಆದರ್ಶಗಳ ಕುರಿತು ಮಾತನಾಡಿದರು. ಮೌಲಾನಾ ಯಝ್ದಾನಿ, ಡಾ. ಇರ್ಷಾದ್, ಡಾ. ಶಹಝಾದ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.