ದೋಹಾ: ಭಾರತೀಯ ರಾಯಭಾರ ಕಚೇರಿಯು ಕತಾರ್ ಗೆ ಹೋಗುವವರಿಗೆ ಪ್ರಧಾನ ಎಚ್ಚರಿಕೆಯೊಂದನ್ನು ನೀಡಿದೆ. ಇನ್ನೊಬ್ಬರಿಗಾಗಿ ನೀವು ಕತಾರ್ ಗೆ ಔಷಧಿಗಳನ್ನು ತರಬೇಡಿ ಎಂದು ಅದು ಎಚ್ಚರಿಸಿದೆ. ಅಲ್ಲದೆ, ಸ್ವಯಂ ಉಪಯೋಗಕ್ಕಾಗಿ ಔಷಧ ತೆಗೊಂಡು ಹೋಗುವವರು ತುಂಬಾ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಸಿದೆ. ಔಷಧಿಯನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ತಲುಪಿಸಲು ತೆಗೊಂಡು ಹೋಗುವುದು ಸೂಕ್ತವಲ್ಲ. ಕತಾರಲ್ಲಿ ನಿಷೇಧಿಸಿದ್ದ ಔಷಧಗಳ ಬಗ್ಗೆ ಜನರಿಗೆ ಮಾಹಿತಿ ಇರಬೇಕಾಗಿದೆ ಎಂದು ಹೇಳಿದೆ. ನಿದ್ರೆ ಮತ್ತು ಅಮಲು ಭರಿಸುವ ಅಂಶವಿರುವ ಅನೇಕ ಮನೋವೈದ್ಯಕೀಯ ಔಷಧಿಗಳನ್ನು ಕತಾರ್‌ನಲ್ಲಿ ನಿಷೇಧಿಸಲಾಗಿದೆ. ಅವುಗಳಲ್ಲಿ ಕೆಲವು Lyrica, Tramadol, Alprazol-am (Xanax), Diazepam (Valium), Zolam, Clonazepam, Zolpidem, Codeine, Methadone ಮತ್ತು Pregabalin. ನಿಷೇಧಿತ ಇಂತಹ ಔಷಧಗಳನ್ನು ಕತಾರಿಗೆ ತರುವುದು ಬಂಧನ ಮತ್ತು ಜೈಲುವಾಸಕ್ಕೆ ಕಾರಣವಾಗಬಹುದು ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ಆದರೆ ಖತಾರಲ್ಲಿ ನಿಷೇಧಕ್ಕೊಳಗಾಗದ ಔಷಧಿಗಳನ್ನು ಸ್ವಂತ ಉಪಯೋಗಕ್ಕೆ ತೆಗೊಂಡು ಬರಬಹುದು. ಆದರೆ ಆ ಔಷಧಿಗಳು ಅಧಿಕೃತ ಆಸ್ಪತ್ರೆಯ ವೈದ್ಯರು ಬರೆದಿರಬೇಕು, ಔಷಧಾಲಯದ ಬಿಲ್ ಇರಬೇಕು ಮತ್ತು ಒಂದು ತಿಂಗಳ ಅವಧಿಗಾಗುವಷ್ಟೇ ಔಷಧ ತರಬಹುದು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.