ನವದೆಹಲಿ: ಪಂಜಾಬ್ ಪೊಲೀಸರು ತನಿಖೆ ನಡೆಸುತ್ತಿರುವ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ (ಜಗ್ಜಿತ್ ಸಿಂಗ್ ಮತ್ತು ಪಂಜಾಬ್ ಸರ್ಕಾರ ನಡುವಣ ಪ್ರಕರಣ).
ಘಟನೆಗೆ ಸಂಬಂಧಿಸಿದಂತೆ ಮೇ 29ರಂದು ಐಪಿಸಿ ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿ ದಾಖಲಾಗಿರುವ ಎಫ್‌ಐಆರ್ ಅನ್ನು ಸಿಬಿಐಗೆ ವಹಿಸಬೇಕೆಂದು ಬಿಜೆಪಿ ನಾಯಕ ಜಗಜಿತ್ ಸಿಂಗ್ ಸಲ್ಲಿಸಿರುವ ಅರ್ಜಿ ಕೋರಿದೆ.
“ಹಾಡು ಹಗಲೇ ತಣ್ಣನೆ ಕ್ರೌರ್ಯ ನಡೆದಿರುವ ರೀತಿ ನೋಡಿದರೆ ಪಂಜಾಬ್ ಸರ್ಕಾರ ಅಪರಾಧ ತಡೆಗಟ್ಟುವಲ್ಲಿ ಮಾತ್ರ ವಿಫಲವಾಗಿಲ್ಲ ಬದಲಿಗೆ ಗ್ಯಾಂಗ್ ವಾರ್‌ಗಳನ್ನು ನಿಗ್ರಹಿಸುವಲ್ಲಿಯೂ ದಯನೀಯವಾಗಿ ಸೋತಿದೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿಯ ಪ್ರಮುಖಾಂಶಗಳು
• ಹತ್ಯೆಗೆ ಒಂದು ದಿನ ಮೊದಲು ಪಂಜಾಬ್ ಸರ್ಕಾರ ಮೂಸೆ ವಾಲಾ ಅವರಿಗೆ ನೀಡಿದ್ದ ಭದ್ರತೆ ಹಿಂಪಡೆದಿತ್ತು. ಇದು ಮಾಧ್ಯಮಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.
• ಕೃತ್ಯ ಎಸಗಿರುವವರಲ್ಲಿ ಒಬ್ಬನಾದ ಮನ್‌ಪ್ರೀತ್ ಸಿಂಗ್ ಉತ್ತರಾಖಂಡ ರಾಜ್ಯದಲ್ಲಿ ಸಿಕ್ಕಿಬಿದ್ದ ನಂತರ ಆತನನ್ನು ಬಂಧಿಸಲಾಗಿದೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ಇತರ ಆರೋಪಿಗಳು ಕೂಡ ಪಲಾಯನ ಮಾಡಿರುವ ಸಾಧ್ಯತೆಗಳಿವೆ.
• ಖಲಿಸ್ತಾನಿ ಚಳವಳಿಯಿಂದ ರಾಜ್ಯ ಮುಕ್ತವಾಗಿಲ್ಲದ ಕಾರಣ ಖಲಿಸ್ತಾನ್ ಸ್ಥಾಪನೆಗೆ ಯತ್ನಿಸುತ್ತಿರುವ ಪ್ರತ್ಯೇಕತಾವಾದಿಗಳ ಪಾತ್ರವನ್ನೂ ಪ್ರಕರಣದಲ್ಲಿ ತಳ್ಳಿ ಹಾಕುವಂತಿಲ್ಲ.
(ಕೃಪೆ: ಬಾರ್ ಆ್ಯಂಡ್ ಬೆಂಚ್)