ಹೊಸದಿಲ್ಲಿ: ಹತ್ರಾಸ್‌ನಲ್ಲಿ ಸವರ್ಣೀಯರಿಂದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ವರದಿ ತಯಾರಿಸಲು ಹೋಗುತ್ತಿದ್ದ ವೇಳೆ ಉತ್ತರಪ್ರದೇಶ ಪೊಲೀಸರಿಂದ ಅನ್ಯಾಯವಾಗಿ ಬಂಧಿಸಿ ಜೈಲಿಗೆ ಹಾಕಲ್ಪಟ್ಟ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್ (IPI) ಒತ್ತಾಯಿಸಿದೆ.
ಭಾರತ ಸರ್ಕಾರದ ವಿಧಾನವು ಮಾಧ್ಯಮ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ಹಾನಿಕಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ IPI ಡೆಪ್ಯುಟಿ ಡೈರೆಕ್ಟರ್ ಸ್ಕಾಟ್ ಗ್ರಿಫಿನ್, ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದೀಕ್ ಕಪ್ಪನ್ ಗೆ ಸರಿಯಾದ ಚಿಕಿತ್ಸೆ ನೀಡದ ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
“ಅವರ ಪ್ರಾಮಾಣಿಕ ಪತ್ರಿಕೋದ್ಯಮಕ್ಕಾಗಿ ಅವರನ್ನು ಕ್ರೂರವಾಗಿ ಬೇಟೆಯಾಡಲಾಗುತ್ತಿದೆ. ಆರೋಪಗಳನ್ನು ಸಾಬೀತುಪಡಿಸಲು ಪುರಾವೆಗಳಿಲ್ಲದ ಕಾರಣ ಕಪ್ಪನ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಡಬೇಕು. ಭಾರತದಲ್ಲಿ ಪತ್ರಕರ್ತರಿಗೆ ಕಿರುಕುಳ ನೀಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಎಲ್ಲಾ ಪತ್ರಕರ್ತರೂ ದೇಶದ ವಿವಿಧ ಘಟನೆಗಳನ್ನು ಭಯ, ಕಿರುಕುಳ, ಜೈಲು ಶಿಕ್ಷೆ ಅಥವಾ ತಾರತಮ್ಯಕ್ಕೆ ಒಳಗೊಳ್ಳದೆ ವರದಿ ಮಾಡುವ ವಾತಾವರಣವನ್ನು ಸೃಷ್ಟಿಸಬೇಕು” ಎಂದು ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಒಂಬತ್ತು ತಿಂಗಳಿಂದ ಮಥುರಾ ಜೈಲಿನಲ್ಲಿರುವ ಸಿದ್ದೀಕ್ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಈ ತಿಂಗಳ 6ರಂದು ತಿರಸ್ಕರಿಸಿತ್ತು.