► ಪೊಲೀಸ್ ಇಲಾಖೆಯನ್ನು ರದ್ದು ಮಾಡಿ ಪರಿವಾರಕ್ಕೆ ಕಾನೂನು ಪಾಲನೆಯ ಕೆಲಸ ನೀಡುವ ಉದ್ದೇಶವಿದೆಯೇ?
ಬೆಂಗಳೂರು: ಸಂಘ ಪರಿವಾರದ ಕಾರ್ಯಕರ್ತರ ಅನೈತಿಕ ಪೊಲೀಸ್ ಗಿರಿ ಸಮರ್ಥಿಸಿ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಪುಂಡರು ಕಾನೂನನ್ನು ಕೈಗೆತ್ತಿಕೊಳ್ಳುವ ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸುವ ಮೂಲಕ ಕಾನೂನು ಪಾಲನೆ ನಿಮ್ಮಿಂದ ಸಾಧ್ಯವಿಲ್ಲ ಎಂದು ನಿಮ್ಮ ಅಸಾಮರ್ಥ್ಯವನ್ನು ತೋಡಿಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯವನ್ನು ಜಂಗಲ್ ರಾಜ್ಯ ಮಾಡಬೇಡಿ. ದಯವಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. ಅನೈತಿಕ ಪೊಲೀಸ್‌ಗಿರಿಗೆ ಬಲಿಯಾಗುತ್ತಿರುವುದು ಅಸಹಾಯಕ, ಅಮಾಯಕ ಹೆಣ್ಣುಮಕ್ಕಳು. ಸ್ತ್ರಿ ಪೀಡಕರ ಹೆಡೆಮುರಿ ಕಟ್ಟಿ ಜೈಲಿಗೆ ತಳ್ಳಬೇಕಾದ ನೀವು ಅದನ್ನು ಮಾಡದೆ ದುಷ್ಕರ್ಮಿಗಳ ರಕ್ಷಣೆಗೆ ನಿಂತಿದ್ದೀರಿ. ಕುರ್ಚಿಯ ರಕ್ಷಣೆಗಾಗಿ ಸಂಘ ಪರಿವಾರದ ಓಲೈಕೆ ನಿಮಗೆ ಅನಿವಾರ್ಯವಾಗಿರಬಹುದು. ಇದಕ್ಕಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದೇ? ಎಂದು ಪ್ರಶ್ನಿಸಿದ್ದಾರೆ.
ಆ್ಯಕ್ಷನ್ ಗೆ ರಿಯಾಕ್ಷನ್ ಇರುತ್ತೆ ಎಂದು ಹೇಳುವ ಮೂಲಕ ಯಾವ ಕಾಡಿನ ನ್ಯಾಯವನ್ನು ಪಾಠ ಮಾಡುತ್ತಿದ್ದೀರಿ @BSBommai ಅವರೇ? ಪೊಲೀಸ್ ಇಲಾಖೆಯನ್ನು ರದ್ದು ಮಾಡಿ ನಿಮ್ಮ ಪರಿವಾರಕ್ಕೆ ಕಾನೂನು ಪಾಲನೆಯ ಕೆಲಸವನ್ನು ವಹಿಸಿಕೊಡುವ ದುಷ್ಟ ಉದ್ದೇಶವೇನಾದರೂ ನಿಮಗಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.