ದೇವಸ್ಥಾನ ಧ್ವಂಸ ಮಾಡಿರುವ ಬಿಜೆಪಿಯವರ ಢೋಂಗಿತನ ಬಯಲು: ಸಿದ್ದರಾಮಯ್ಯ ವಾಗ್ದಾಳಿ

Prasthutha|

ಬೆಂಗಳೂರು: ಹಿಂದೂ ದೇವಾಲಯಗಳನ್ನು ಬಿಜೆಪಿಯವರೇ ನಾಶ ಮಾಡುತ್ತಿದ್ದಾರೆ. ಮಾತೆತ್ತಿದರೆ, ರಾಮನ ಜಪ, ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಭಕ್ತರ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆ ಮಾಡಿ ಆಮೇಲೆ ದೇವಸ್ಥಾನ ಕೆಡವಬಹುದಿತ್ತು. ಏಕಾಏಕಿ ದೇವಸ್ಥಾನ ಧ್ವಂಸ ಮಾಡಿರುವುದು ಬಿಜೆಪಿಯವರ ಢೋಂಗಿತನವನ್ನು ತೋರಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.


ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಗಮನಕ್ಕೆ ತರದೇ ಮುಖ್ಯಕಾರ್ಯದರ್ಶಿಗಳು ದೇವಸ್ಥಾನ ತೆರವುಗೊಳಿಸುವ ಕುರಿತು ಪತ್ರ ಬರೆಯಲು ಸಾಧ್ಯವಿಲ್ಲ. 15ನೇ ತಾರೀಖಿನಿಂದ ಜಿಲ್ಲಾಧಿಕಾರಿಗಳು ಹಾಗೂ ತಹಶಿಲ್ದಾರರು ಸುಪ್ರೀಂ ಕೋರ್ಟ್ ನ ತೀರ್ಮಾನದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತವಾದ ಮೇಲೆ ತಮ್ಮ ಮಾನ ಉಳಿಸಿಕೊಳ್ಳಲು ಸರ್ಕಾರ ಬಣ್ಣ ಬದಲಾಯಿಸಿದೆ. ಈಗ ಅವರಿಗೆ ಒಡೆಯಬೇಡಿ ಎಂಬ ಸೂಚನೆ ಕೊಡ್ತೀವಿ ಎನ್ನುತ್ತಿದ್ದಾರೆ. ಸರ್ಕಾರದ ಗಮನಕ್ಕೆ ಬಾರದೆ ದೇವಾಲಯ ಒಡೆದಿದ್ದಾರ? ಮೈಸೂರು ಸಂಸದರು ಈಗ ದೇವಾಲಯ ಒಡೆದು ಆದಮೇಲೆ ಮಾತನಾಡುತ್ತಾರೆ. ಇದರ ಬದಲು ಸರ್ಕಾರದ ಗಮನಕ್ಕೆ ತಂದು ದೇವಸ್ಥಾನ ಒಡೆಯುವುದನ್ನು ತಡೆಯಬೇಕಿತ್ತು ಎಂದು ಹೇಳಿದರು.

- Advertisement -


ಹಿಂದುತ್ವವಾದ ಎನ್ನುವುದು ಕೇವಲ ರಾಜಕಾರಣಕ್ಕಾಗಿ, ಓಟಿಗಾಗಿ ಮಾತ್ರ, ಅಸಲಿಗೆ ಬಿಜೆಪಿಯವರಿಗೆ ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಅಕ್ರಮ ದೇವಸ್ಥಾನಗಳ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಣಯ ಬಂದಿದ್ದು ಇವತ್ತು ನಿನ್ನೆಯದಲ್ಲ. ಸರ್ಕಾರ ಇಷ್ಟು ದಿನ ಏನು ಮಾಡುತ್ತಿತ್ತು? ಬಿಜೆಪಿ ಸರ್ಕಾರ ಬಂದು ಎರಡೂವರೆ ವರ್ಷ ಆಯಿತು. ಈಗ ಯಾಕೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವ ನಾಟಕ? ಇದು ಢೋಂಗಿತನವಲ್ಲದೆ ಇನ್ನೇನು? ನಾವು ಬಿಜೆಪಿಯವರಂತೆ ರಾಜಕೀಯಕ್ಕಾಗಿ ಧರ್ಮ, ದೇವರನ್ನು ಬಳಸಿಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದರು.


ನಾವು ಯಾವ ಆಪರೇಷನ್ ಮಾಡಲ್ಲ, ಯಾರನ್ನೂ ಬಲವಂತವಾಗಿ ಪಕ್ಷಕ್ಕೆ ಕರೆತರಲ್ಲ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ, ಪಕ್ಷಕ್ಕೆ ಬದ್ಧರಾಗಿ ಇರುತ್ತೇನೆಂದು ಬರುವವರಿಗೆ ಪಕ್ಷದಲ್ಲಿ ಅವಕಾಶ ಇದೆ ಎಂದು ಪ್ರಶ್ನೆಯೊಂದಕ್ಕೆ ವಿರೋಧ ಪಕ್ಷದ ನಾಯಕ ಪ್ರತಿಕ್ರಿಯಿಸಿದರು.

- Advertisement -