ಅಲ್ಲೊಬ್ಬರು ಪಾಳೆಯಗಾರ, ಇಲ್ಲೊಬ್ಬರು ಮಾಂಡಲಿಕ! ನೈಟ್ ಕರ್ಪ್ಯೂ ಕುರಿತ ರಾಜ್ಯ ಸರ್ಕಾರದ ಕ್ರಮಕ್ಕೆ ಸಿದ್ದರಾಮಯ್ಯ ವ್ಯಂಗ್ಯ

Prasthutha|

ಬೆಂಗಳೂರು : ರಾಜ್ಯದ ಕೆಲವು ನಗರಗಳಲ್ಲಿ ರಾತ್ರಿ ಕರ್ಪ್ಯೂಹೇರಿರುವ ರಾಜ್ಯ ಸರ್ಕಾರದ ಕ್ರಮ ಕೊರೊನಾ ಓಡಿಸಲು ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷವಾದುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯದ ಆಯ್ದ ನಗರಗಳಲ್ಲಿ ರಾತ್ರಿ ಕರ್ಪ್ಯೂ ಹೇರಿರುವ ರಾಜ್ಯ ಸರ್ಕಾರದ ಕ್ರಮ ಕೊರೊನಾ ಓಡಿಸಲು ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷವಾದುದು. ಅಲ್ಲೊಬ್ಬರು ಪಾಳೆಯಗಾರ, ಇಲ್ಲೊಬ್ಬರು ಮಾಂಡಲಿಕ! ಭಲೇ ಜೋಡಿ! ಎಂದು ವ್ಯಂಗ್ಯವಾಡಿದ್ದಾರೆ.

- Advertisement -

ಸಿಎಂ ಬಿ.ಎಸ್. ಯಡಿಯೂರಪ್ಪನವರೇ, ಕೊರೊನಾ ನಿಯಂತ್ರಣಕ್ಕೆ ಯಾವ ರೀತಿಯಲ್ಲಿಯೂ ಉಪಯೋಗವಾಗದ ಆಯ್ದ ನಗರಗಳಲ್ಲಿ ರಾತ್ರಿ ಕರ್ಪ್ಯೂವಿನ ನಾಟಕ ಯಾಕೆ? ಕೊರೊನಾ ನಿಯಂತ್ರಿಸುವ ಪ್ರಾಮಾಣಿಕ ಇಚ್ಚೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವ ಸುಧಾಕರ್ ಹೊಂದಿದ್ದರೆ, ಮೊದಲು ಕೊರೊನಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು, ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು ಮತ್ತು ಸೋಂಕಿತರಿಗೆ ತಕ್ಷಣ ಚಿಕಿತ್ಸೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಕೋವಿಡ್ ವ್ಯಾಕ್ಸಿನ್ ಪ್ರಾರಂಭಿಸಿ 80 ದಿನಗಳು ಕಳೆದರೂ ಕೇವಲ ಶೇಕಡಾ ಒಂದರಷ್ಟು ಜನಸಂಖ್ಯೆಗೆ ಮಾತ್ರ ನೀಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಈಗಾಗಲೇ ವ್ಯಾಕ್ಸಿನ್ ಕೊರತೆಯ ದೂರು ಕೇಳಿಬರತೊಡಗಿದೆ. ಗಿಮಿಕ್‌ಗಳನ್ನು ಬಿಟ್ಟು ಈ ಕಡೆ ಗಮನಹರಿಸಿ ಎಂದು ಹೇಳಿದ್ದಾರೆ.

- Advertisement -

ದೇಶದ ಪ್ರಧಾನಿ ಅಂಧಾ ದರ್ಬಾರ್ ನಿಂದ ರಾಜ್ಯದ ಮುಖ್ಯಮಂತ್ರಿಗಳು ಸ್ಪೂರ್ತಿ ಪಡೆದರೆ, ಮುಖ್ಯಮಂತ್ರಿಗಳಿಂದ ಪ್ರೇರಣೆ ಪಡೆದು ಕೆಲವು ಜಿಲ್ಲಾಧಿಕಾರಿಗಳು ಕೊರೊನಾ ನಿಯಂತ್ರಣದ ಹೆಸರಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳೇ, ನೀವು ಸ್ವಲ್ಪ ಬುದ್ದಿ ಕಲಿಯಿರಿ ಅವರಿಗೂ ಬುದ್ದಿ ಹೇಳಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Join Whatsapp