Home ಟಾಪ್ ಸುದ್ದಿಗಳು ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ಕೈಬಿಡಿ: ಸರಕಾರವನ್ನು ಆಗ್ರಹಿಸಿದ ಸಿದ್ದರಾಮಯ್ಯ

ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ಕೈಬಿಡಿ: ಸರಕಾರವನ್ನು ಆಗ್ರಹಿಸಿದ ಸಿದ್ದರಾಮಯ್ಯ

ಬೆಂಗಳೂರು: ನಿರುದ್ಯೋಗದಿಂದಾಗಿ ಪ್ರತಿಯೊಂದು ಕುಟುಂಬದ ಆದಾಯ ಗಣನೀಯವಾಗಿ ಕಡಿಮೆಯಾಗಿದೆ. ಇನ್ನೊಂದೆಡೆ ಅಗತ್ಯವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಸರಕಾರ ಈ ಕೂಡಲೇ ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ಕೈಬಿಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸರಣಿ ಟ್ವೀಟ್ ಮೂಲಕ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಿದ್ದು, ಪೆಟ್ರೋಲ್-ಡೀಸೆಲ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿಹೋಗಿರುವ ಜನತೆಗೆ, ರಾಜ್ಯ ಬಿಜೆಪಿ ಸರ್ಕಾರ ವಿದ್ಯುತ್ ದರವನ್ನೂ ಹೆಚ್ಚಿಸುವ ಮೂಲಕ ಚೇತರಿಸಿಕೊಳ್ಳಲಾಗದಂತಹ ಹೊಡೆತ ನೀಡಲು ಹೊರಟಿದೆ. ಇದು ಬಿಜೆಪಿ ಸರ್ಕಾರದ ಆಡಳಿತದ ವೈಫಲ್ಯಕ್ಕೆ ರಾಜ್ಯದ ಜನತೆ ತೆರಬೇಕಾಗಿರುವ ಬೆಲೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕಲ್ಲಿದ್ದಲು ದರ ಏರಿಕೆ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಕುಂಟು ನೆಪಮಾತ್ರ. ಈ ಏರಿಕೆ ತಾತ್ಕಾಲಿಕ ಸ್ವರೂಪದ್ದೆಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಹೀಗಿದ್ದರೂ ತಾತ್ಕಾಲಿಕ ಏರು-ಪೇರುಗಳನ್ನೂ ಸ್ವಲ್ಪ ಕಾಲ ತಾಳಿಕೊಳ್ಳುವ ಆರ್ಥಿಕ ಚೈತನ್ಯ ಇಲ್ಲ ಎನ್ನುವುದು ರಾಜ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ದರವನ್ನು ಏರಿಸಿರುವ ರಾಜ್ಯ ಸರ್ಕಾರ ಮೂರು ತಿಂಗಳ ಅವಧಿಯಲ್ಲಿಯೇ ಮತ್ತೊಮ್ಮೆ ದರ ಏರಿಕೆ ಮಾಡಿದೆ. ಈ ದರ ಏರಿಕೆಯ ಸರಣಿ ನಿಲ್ಲುವ ಹಾಗೆ ಕಾಣುತ್ತಿಲ್ಲ, ಶೀಘ್ರದಲ್ಲಿಯೇ ಇನ್ನೊಮ್ಮೆ ದರ ಏರಿಕೆಯ ಆದೇಶ ಹೊರಬಿದ್ದರೂ ಆಶ್ಚರ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಎಸ್ಕಾಂಗಳು ಸಲ್ಲಿಸುವ ಪ್ರಸ್ತಾವಗಳನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳಲು ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ರಚನೆಯಾಗಿಲ್ಲ. ಎಸ್ಕಾಂಗಳು ನಷ್ಟದಲ್ಲಿದ್ದರೆ ಅದಕ್ಕೆ ಅದಕ್ಷತೆ ಮತ್ತು ಭ್ರಷ್ಟಾಚಾರವೂ ಕಾರಣ. ಕೆಇಆರ್ ಸಿ ರಾಜ್ಯದ ಜನತೆಯ ಹಿತವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಿಸಬೇಕೇ ಹೊರತು ಎಸ್ಕಾಂಗಳ ಹಿತವನ್ನಲ್ಲ ಎಂದು ಕಿವಿಮಾತನ್ನು ಹೇಳಿದ್ದಾರೆ.

Join Whatsapp
Exit mobile version