Home ಟಾಪ್ ಸುದ್ದಿಗಳು ಹಿಜಾಬ್ ಬಗ್ಗೆ ಮಾತನಾಡಿದ್ರೆ ಏನಾಗುತ್ತೋ ಅನ್ನೋದು ಬೇಡ: ಡಿಕೆಶಿಗೆ ಪರೋಕ್ಷ ಟಾಂಗ್ ಕೊಟ್ಟ ಸಿದ್ದರಾಮಯ್ಯ?

ಹಿಜಾಬ್ ಬಗ್ಗೆ ಮಾತನಾಡಿದ್ರೆ ಏನಾಗುತ್ತೋ ಅನ್ನೋದು ಬೇಡ: ಡಿಕೆಶಿಗೆ ಪರೋಕ್ಷ ಟಾಂಗ್ ಕೊಟ್ಟ ಸಿದ್ದರಾಮಯ್ಯ?

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸೃಷ್ಟಿಸಿರುವ ಹಿಜಾಬ್ ಗದ್ದಲದ ಬಗ್ಗೆ ಕಾಂಗ್ರೆಸ್ ನಾಯಕರು ಮೌನವಹಿಸಿದ್ದರು, ಅಲ್ಲದೇ ಹಿಜಾಬ್ ಬಗ್ಗೆ ಕಾಂಗ್ರೆಸ್ಸಿನ ಯಾರೂ ಸಾರ್ವಜನಿಕವಾಗಿ ಹೇಳಿಕೆ ಕೊಡದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದರು. ಆದರೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರೆ ಎನ್ನುವ ಅನುಮಾನ ಎದುರಾಗಿದೆ.

ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದು, ಸಹಿಷ್ಣುತೆ, ಸಹಬಾಳ್ವೆ ಸಂವಿಧಾನದಲ್ಲಿದೆ. ಕಾಂಗ್ರೆಸ್ ಇದರೊಂದಿಗೆ ನಂಬಿಕೆ ಇಟ್ಟಿದೆ. ನೂರಾರು ವರ್ಷಗಳಿಂದ ಹಿಜಾಬ್ ಇದೆ. ಇದು ಧಾರ್ಮಿಕ ಸಂಪ್ರದಾಯ. ಈ ವಿವಾದವನ್ನು ಸರಕಾರ ಬಗೆಹರಿಸಬಹುದಿತ್ತು, ಆದರೆ ವಿನಾಕಾರಣ ವಿವಾದ ಸೃಷ್ಟಿಸಿದ್ದಾರೆ ಎಂದರು.

ಹಿಜಾಬ್ ಬಗ್ಗೆ ನಾವು ಮಾತನಾಡಿದರೆ ಏನಾಗುತ್ತೋ ಅನ್ನೋದು ಬೇಡ. ತಪ್ಪು ತಿಳಿದುಕೊಳ್ಳುತ್ತಾರೆ ಅನ್ನುವುದು ಬೇಡ. ನಮಗೆ ಮೊದಲು ಕ್ಲಾರಿಟಿ ಇರಬೇಕು. ನಾವು ಅಗ್ರೆಸ್ಸೀವ್ ಆಗಿ ಇದನ್ನು ಪ್ರತಿಪಾದಿಸಬೇಕು. ಇಲ್ಲದೇ ಹೋದರೆ ಸೆಕ್ಯುಲರಿಸಮನ್ನು ರಕ್ಷಿಸಲು ಸಾಧ್ಯವಿಲ್ಲ ಎಂದರು.

ಕೋಮುವಾದವನ್ನು ಬಿಜೆಪಿ ಮುಂದಿನ ಚುನಾವಣಾ ದೃಷ್ಟಿಯಿಂದ ಹುಟ್ಟುಹಾಕುತ್ತಿದೆ, ಹಿಜಾಬ್, ಭಗವದ್ಗೀತೆ ಎಲ್ಲವನ್ನೂ ತಂದಿದ್ದಾರೆ. ಇದೀಗ ಹಲಾಲ್ ಅನ್ನು ಚರ್ಚೆಯಾಗಿಸಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದರು. ಇದೆ ಸಂದರ್ಭ ಯುವಕರಿಗೆ ದ್ವೇಷದ ವಿಷಬೀಜವನ್ನು ಬಿತ್ತುತ್ತಿರುವ ಬಿಜೆಪಿಯ ವಿರುದ್ಧ ನಾಯಕರು ಹೋರಾಡುವಂತೆ ಸಿದ್ದರಾಮಯ್ಯ ಕರೆ ನೀಡಿದರು.

Join Whatsapp
Exit mobile version