Home ಟಾಪ್ ಸುದ್ದಿಗಳು ‘ಮೋದಿಯವರೇ, ನಮ್ಮ ನ್ಯಾಯಬದ್ಧ ಪಾಲನ್ನಾದರೂ ನೀಡಿ ಪುಣ್ಯ ಕಟ್ಕೊಳ್ಳಿ’ : ಸಿದ್ದರಾಮಯ್ಯ

‘ಮೋದಿಯವರೇ, ನಮ್ಮ ನ್ಯಾಯಬದ್ಧ ಪಾಲನ್ನಾದರೂ ನೀಡಿ ಪುಣ್ಯ ಕಟ್ಕೊಳ್ಳಿ’ : ಸಿದ್ದರಾಮಯ್ಯ

ಬೆಂಗಳೂರು : ಕೊರೊನಾ ಪರಿಣಾಮವನ್ನು ಸಮರ್ಥವಾಗಿ ನಿರ್ವಹಿಸಲಾಗದೆ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಇದಕ್ಕೆ ನ್ಯಾಯಬದ್ಧವಾಗಿ ತೆರಿಗೆ ಪಾಲನ್ನು ನೀಡದಿರುವ ಕೇಂದ್ರ ಸರ್ಕಾರವೂ ಕಾರಣ. ಪ್ರಧಾನಿಯವರೇ, ನೀವು ವಿಶೇಷ ಆರ್ಥಿಕ ನೆರವು ಕೊಡುವುದು ಬೇಡ , ನಮ್ಮ ನ್ಯಾಯಬದ್ಧ ಪಾಲನ್ನಷ್ಟಾದರೂ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಅತ್ಯಂತ ನಿರಾಶದಾಯಕ. ಕೊರೊನಾ ಸೋಂಕಿನಿಂದ ತತ್ತರಿಸಿಹೋಗಿರುವ ರಾಜ್ಯಗಳಿಗೆ ತುರ್ತಾಗಿ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ ಎಂದು ಕಿಡಿಕಾರಿದ್ದಾರೆ.

ಕೊರೊನಾ ಉಲ್ಭಣವಾದ ಕಾರಣದಿಂದಾಗಿ ಲಾಕ್‌ಡೌನ್ ಅನಿವಾರ್ಯ ಎಂಬಂತೆ ರಾಜ್ಯ ಸರ್ಕಾರ ಮಾತನಾಡುತ್ತಿದೆ. ಲಾಕ್ ಡೌನ್ ಹೇರಿದರೆ ಕಷ್ಟನಷ್ಟಕ್ಕೀಡಾಗುವ ಜನತೆಗೆ ಕೇಂದ್ರ ಸರ್ಕಾರ ನೀಡುವ ನೆರವಿನ ಘೋಷಣೆಯನ್ನು ಜನ ನಿರೀಕ್ಷಿಸಿದ್ದರು. ಮೋದಿ ಭಾಷಣ ‘ನಿಮ್ಮ ತಲೆ ಮೇಲೆ ನಿಮ್ಮ ಕೈ’ ಎಂಬ ಸಂದೇಶ ನೀಡಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರು ಆಮ್ಲಜನಕ ಇಲ್ಲದೆ, ಐಸಿಯು ಹಾಸಿಗೆಗಳಿಲ್ಲದೆ,‌ ರೆಮಿಡಿಸಿವೆರ್‌ನಂತಹ ಪ್ರಾಣರಕ್ಷಕ ಔಷಧಿ ಸಿಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡದ ಪ್ರಧಾನಿ ಮೋದಿ ಜನತೆಗೆ ಜವಾಬ್ದಾರಿಯ ಪಾಠ ಹೇಳಿದ್ದಾರೆ. ಪ್ರಧಾನಿಗಳೇ ಮೊದಲು ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version