Home ಟಾಪ್ ಸುದ್ದಿಗಳು ಚುನಾವಣಾ ಬಾಂಡ್ ಪಕ್ಕಾ ಬ್ಲಾಕ್‌ಮೇಲ್ ಹಗರಣ ಎಂದ ಸಿದ್ದರಾಮಯ್ಯ: ಮೋದಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ ಸಿಎಂ

ಚುನಾವಣಾ ಬಾಂಡ್ ಪಕ್ಕಾ ಬ್ಲಾಕ್‌ಮೇಲ್ ಹಗರಣ ಎಂದ ಸಿದ್ದರಾಮಯ್ಯ: ಮೋದಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ ಸಿಎಂ

ಬೆಂಗಳೂರು: ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ವಾಗತ. ಜಗತ್ತಿನ ಅತ್ಯಂತ ದೊಡ್ಡ ಭ್ರಷ್ಟಾಚಾರ ಹಗರಣವಾಗಿ ಹೊರಹೊಮ್ಮುತ್ತಿರುವ ಚುನಾವಣಾ ಬಾಂಡ್ ಸುಲಿಗೆ ಬಗ್ಗೆ ಭಾರತೀಯ ಜನತಾ ಪಕ್ಷ ಯಾಕೆ ಮೌನವಾಗಿದೆ? ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣ ತಂದು ಜನರಿಗೆ ಹಂಚುತ್ತೇವೆ, ನೋಟ್ ಬ್ಯಾನ್ ಮಾಡಿ ಕಪ್ಪುಹಣದ ಮೂಲೋತ್ಪಾಟನೆ ಮಾಡುತ್ತೇವೆ, ನಾ ಖಾವೂಂಗಾ ನಾ ಖಾನೆ ದೂಂಗಾ, ದೇಶದ ಸಂಪತ್ತಿಗೆಲ್ಲ ನಾನೇ ಚೌಕಿದಾರ ಎಂದೆಲ್ಲ ಹೇಳಿ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿಯವರೇ ಕನಿಷ್ಠ ಚುನಾವಣಾ ಬಾಂಡ್ ಹಗರಣದ ಬಗ್ಗೆಯಾದರೂ ಉತ್ತರಿಸಿ ಎಂದು ಸರಣಿ ಪ್ರಶ್ನೆಗಳ ಮೂಲಕ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಭಾರತೀಯ ಸ್ಟೇಟ್ ಬ್ಯಾಂಕ್ ಸಂಪೂರ್ಣ ಮಾಹಿತಿ ನೀಡಲು ಯಾಕೆ ಹಿಂಜರಿಯುತ್ತಿದೆ? ಚುನಾವಣಾ ಬಾಂಡ್ ಗಳ ಮಾರಾಟ ಮತ್ತು ಖರೀದಿ ವ್ಯವಹಾರ ಕಾನೂನುಬದ್ಧವಾಗಿ ನಡೆದಿದ್ದರೆ ಎಸ್‌ಬಿಐ ಯಾಕೆ ಮಾಹಿತಿ ಮುಚ್ಚಿಡಲು ಪ್ರಯತ್ನಿಸುತ್ತಿದೆ? ಎಸ್‌ಬಿಐ ಮೇಲೆ ಒತ್ತಡ ಹೇರುತ್ತಿರುವವರು ಯಾರು ಎಂದು ಕೇಳಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರೇ ದಯವಿಟ್ಟು ಉತ್ತರಿಸಿ ಎಂದು ಒತ್ತಾಯಿಸಿದ್ದಾರೆ.

ಮಾಧ್ಯಮಗಳು ವಿಶ್ಲೇಷಿಸುತ್ತಿರುವ ಚುನಾವಣಾ ಆಯೋಗ ಪ್ರಕಟಿಸಿರುವ ಮಾಹಿತಿಯನ್ನು ನೋಡಿದರೆ ಕೇಂದ್ರ ಸರ್ಕಾರ ಉದ್ಯಮಿಗಳ ಬ್ಲಾಕ್‌ಮೇಲ್ ಮಾಡುತ್ತಿರುವಂತೆ ಕಾಣುತ್ತಿದೆ. ಉದ್ಯಮಿಗಳ ಮೇಲೆ ನಡೆದಿರುವ ಐಟಿ,ಇಡಿ,ಸಿಬಿಐ ದಾಳಿಗಳ ದಿನಾಂಕ ಮತ್ತು ಆ ಉದ್ಯಮಿಗಳು ಚುನಾವಣಾ ಬಾಂಡ್‌ಗಳ ಖರೀದಿ ದಿನಾಂಕಗಳನ್ನು ನೋಡಿದರೆ ಇದೊಂದು ಪಕ್ಕಾ ಬ್ಲಾಕ್‌ಮೇಲ್ ಹಗರಣದಂತೆ ಕಾಣುತ್ತಿದೆ. ದೇಣಿಗೆ ವಸೂಲಿಗಾಗಿ ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆಯೇ? ಚುನಾವಣಾ ಬಾಂಡ್ ಎನ್ನುವುದು ಬಿಜೆಪಿಯ ಕೈಯಲ್ಲಿರುವ ರಾಜಕೀಯ ಸುಲಿಗೆಯ ಬ್ರಹ್ಮಾಸ್ತ್ರವೇ? ಎಂದು ಸರಣಿ ಪ್ರಶ್ನೆಗಳೊಂದಿಗೆ ಸಿದ್ದರಾಮಯ್ಯ, ಪ್ರಧಾನಿಯವರೇ ಉತ್ತರಿಸಿ ಎಂದು ಆಗ್ರಹಿಸಿದ್ದಾರೆ.

ಬಯಲಾಗುತ್ತಿರುವ ಮಾಹಿತಿಗಳನ್ನು ನೋಡಿದರೆ ಚುನಾವಣಾ ಬಾಂಡ್ ಹಗರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಿರುವವರು ಮೂಲಭೂತ ಸೌಕರ್ಯ ನಿರ್ಮಾಣದ ಎಂಜನಿಯರಿಂಗ್ ಸಂಸ್ಥೆಗಳು ಮತ್ತು ಔಷಧಿ ಉತ್ಪಾದನಾ ಕಂಪೆನಿಗಳು. ಇಂತಹ ಭ್ರಷ್ಟ, ವಂಚಕ ಸಂಸ್ಥೆಗಳು ನಿರ್ಮಾಣ ಮಾಡಿರುವ ರಸ್ತೆ, ಸೇತುವೆ, ಕಟ್ಟಡಗಳು ಎಷ್ಟು ಸುಭದ್ರ? ಇಂತಹ ಭ್ರಷ್ಟ-ವಂಚಕ ಸಂಸ್ಥೆಗಳು ತಯಾರಿಸಿದ ಔಷಧಿಗಳು ಎಷ್ಟು ಸುರಕ್ಷಿತ? ಇದಕ್ಕೆ ಉತ್ತರಿಸಬೇಕಾದವರು ನೀವಲ್ಲವೇ ಪ್ರಧಾನಿಗಳೇ ಎಂದು ಸಿದ್ದರಾಮಯ್ಯ ಗಂಭೀರ ವಿಚಾರವನ್ನು ಮುಂದಿಟ್ಟು ಪ್ರಧಾನಿಯವರನ್ನು ಉತ್ತರಿಸಲು ಆಗ್ರಹಿಸಿದ್ದಾರೆ.

ಸುಪ್ರೀಂಕೋರ್ಟ್ ಖುದ್ದಾಗಿ ಮುಂದೆ ನಿಂತು ಬಯಲು ಮಾಡುತ್ತಿರುವ ಚುನಾವಣಾ ಬಾಂಡ್ ಹಗರಣದ ಬಗ್ಗೆ ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಅನುಮಾನ ಹುಟ್ಟಿಕೊಂಡಿದೆ. ತಮ್ಮ ತೆರಿಗೆ ಹಣದ ದುರುಪಯೋಗ ನಡೆದಿದೆ, ಇದರಲ್ಲಿ ಕೆಂದ್ರ ಸರ್ಕಾರದ ಪಾತ್ರವಿದೆ ಎಂದು ಜನತೆ ನಂಬಿದ್ದಾರೆ. ಈ ಅನುಮಾನವನ್ನು ಹೋಗಲಾಡಿಸಲು ಸುಪ್ರೀಂ ಕೋರ್ಟ್ ಉನ್ನತಾಧಿಕಾರದ ಸಮಿತಿಯನ್ನು ರಚಿಸಿ ಚುನಾವಣಾ ಬಾಂಡ್ ಹಗರಣದ ತನಿಖೆ ನಡೆಸಬೇಕು ಮತ್ತು ಅಲ್ಲಿಯ ವರೆಗೆ ಬಿಜೆಪಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಪ್ರಕಟನೆ ಮೂಲಕ ಹೇಳಿದ್ದಾರೆ.

Join Whatsapp
Exit mobile version