“ದಿ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡೀಸ್” ಪುಸ್ತಕ ಬಿಡುಗಡೆ ಮಾಡಿದ ಸಿದ್ದರಾಮಯ್ಯ

Prasthutha|

ಬೆಂಗಳೂರು: ಕೇಂದ್ರದ ಮಾಜಿ ಸಚಿವ, ದಿವಂಗತ ಜಾರ್ಜ್ ಫರ್ನಾಂಡೀಸ್ ಅವರ ಜೀವನ ಚರಿತ್ರೆ ಕುರಿತಾದ “ದಿ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡೀಸ್” ಪುಸ್ತಕವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಗುರುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

- Advertisement -


ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನ ರಾಜಕೀಯ ಬದುಕಿನಲ್ಲಿ ಜಾರ್ಜ್ ಫರ್ನಾಂಡಿಸ್ ಅವರಿಗೆ ವಿಶೇಷ ಸ್ಥಾನ ಇದೆ. ಮೈಸೂರಿನಲ್ಲಿ ನಾನು ಕಾನೂನು ವ್ಯಾಸಂಗ ಮಾಡುತ್ತಿದ್ದಾಗ ನನಗೆ ಮೇಸ್ಟ್ರಾಗಿದ್ದವರು ಖ್ಯಾತ ಸಮಾಜವಾದಿ ಮತ್ತು ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಗಳು. ಅವರೇ ನನ್ನನ್ನು ರಾಜಕೀಯಕ್ಕೆ ಎಳೆದು ತಂದವರು. ಅವರ ಒತ್ತಾಯದಿಂದ ನಾನು ಸಮಾಜವಾದಿ ಪಕ್ಷ ಸೇರಿದ್ದೆ. ಅವರ ಮೂಲಕ ನನಗೆ ಜಾರ್ಜ್ ಫರ್ನಾಂಡಿಸ್ ಪರಿಚಯವಾಗಿದ್ದವರು, ಕನ್ನಡಿಗರೇ ಆಗಿದ್ದರಿಂದ ಹೆಚ್ಚು ಆತ್ಮೀಯರಾಗಿದ್ದರು ಎಂದರು.
ಆ ದಿನದಿಂದ ಇತ್ತೀಚೆಗೆ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿಯುವ ವರೆಗೆ ನನಗೆ ಅವರ ಜೊತೆ ಸ್ನೇಹಪೂರ್ವಕ ಒಡನಾಟ ಇತ್ತು, ಕೊನೆದಿನಗಳ ಅವರ ರಾಜಕೀಯ ನಿಲುವುಗಳ ಬಗ್ಗೆ ನನಗೆ ಭಿನ್ನಾಭಿಪ್ರಾಯವಿದ್ದರೂ ಸ್ನೇಹ ರಾಜಕೀಯವನ್ನು ಮೀರಿದ್ದ ಸಂಬಂಧವಾಗಿತ್ತು. ಜಾರ್ಜ್ ಫರ್ನಾಂಡೀಸ್ ಅವರು ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿದ್ದಾಗ ಕೈಗಾರಿಕಾ ಸಚಿವರಾಗಿದ್ದರು. ಆಗ ಮೈಸೂರಿಗೆ ಒಮ್ಮೆ ಬಂದಿದ್ದರು. ಮೈಸೂರಿನ ತಮ್ಮೆಲ್ಲಾ ಸ್ನೇಹಿತರನ್ನು ಒಟ್ಟಿಗೆ ಸೇರಿಸಿಕೊಂಡು ನಾನು ಕೋಕೋ ಕೋಲಾ ವಿರುದ್ಧ ಹೋರಾಟವನ್ನು ಮಾಡುತ್ತೇನೆ. ಅದಕ್ಕೆ ನಿಮ್ಮ ಬೆಂಬಲ ಬೇಕು ಮತ್ತು ಯಾವತ್ತೂ ಕೊಕೊ ಕೋಲಾ ಕುಡಿಯುವುದಿಲ್ಲ ಎಂದು ಶಪಥ ಮಾಡಬೇಕು’ ಎಂದು ನನಗೆ ಹೇಳಿದ್ದರು. ಅವರ ಮಾತಿಗೆ ಒಪ್ಪಿ ಕೋಕೋ ಕೋಲ ಕುಡಿಯುವುದನ್ನು ಬಿಟ್ಟವನು ಇಲ್ಲಿಯ ವರೆಗೆ ಕುಡಿದಿಲ್ಲ ಎಂದು ಹೇಳಿದರು.

ಜಾರ್ಜ್ ಫರ್ನಾಂಡೀಸ್ ಅವರಲ್ಲಿ ಸೈದ್ಧಾಂತಿಕ ಬದ್ಧತೆ ಇತ್ತು. ಅವರು ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದವರು. ಬರಿಗೈಲಿ ಮುಂಬೈಗೆ ಹೋಗಿ, ಅಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿ, ರಾಜಕೀಯವಾಗಿ ಬೆಳೆದವರು. ದಕ್ಷಿಣ ಭಾರತದಿಂದ ಕೇಂದ್ರಕ್ಕೆ ಹೋಗಿ ರಾಜಕೀಯದಲ್ಲಿ ಯಶಸ್ಸು ಕಂಡವರು ಬೆರಳೆಣಿಕೆಯ ಮಂದಿ. ಜಾರ್ಜ್ ಮೊದಲ ಚುನಾವಣೆಯಲ್ಲಿಯೇ ಮುಂಬೈನಲ್ಲಿ ಆಗಿನ ಕಾಂಗ್ರೆಸ್ ಪಕ್ಷದ ಜನಪ್ರಿಯ ನೇತಾರ ಎಸ್ .ಕೆ.ಪಾಟೀಲ್ ಅವರನ್ನು ಮಣಿಸಿ ಗೆಲುವು ಸಾಧಿಸಿ ‘ಜಯಂಟ್ ಕಿಲ್ಲರ್” ಎಂದು ಹೆಸರಾದವರು. ತುರ್ತುಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಬಿಹಾರ ರಾಜ್ಯದ ಮುಜಫರ್ ಲೋಕಸಭಾ ಕ್ಷೇತ್ರದಿಂದ ಜೈಲಿನಿಂದಲೇ ಸ್ಪರ್ಧಿಸಿ ಗೆದ್ದು ಬಿಟ್ಟರು. ಅದರ ನಂತರ ಆ ರಾಜ್ಯವನ್ನೇ ತಮ್ಮ ರಾಜಕೀಯದ ಅಖಾಡವನ್ನಾಗಿ ಮಾಡಿಬಿಟ್ಟರು. ಕರ್ನಾಟಕದ ರಾಜಕಾರಣದ ಬಗ್ಗೆ ಅವರಿಗೆ ಆಸಕ್ತಿ ಇತ್ತು. ಈ ಕಾರಣದಿಂದಾಗಿಯೇ 1984ರಲ್ಲಿ ಅವರು ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಗೆಲುವು ಕೈಗೆ ಸಿಗಲಿಲ್ಲ. ಅದರ ನಂತರ ಜಾರ್ಜ್ ಕರ್ನಾಟಕದಿಂದ ದೂರವೇ ಹೋಗಿ ಬಿಟ್ಟರು.

- Advertisement -

1980ರಲ್ಲಿ ನಾನು ಮೊದಲ ಬಾರಿ ಚುನಾವಣಾ ರಂಗ ಪ್ರವೇಶಿಸಿದವನು, ಅದಕ್ಕೆ ಜಾರ್ಜ್ ಅವರ ಒತ್ತಾಯವೂ ಕಾರಣ. ನಾನು ಜನತಾ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಬೇಕೆಂದು ಜಾರ್ಜ್ ಬಂದು ಕೇಳಿಕೊಂಡರು. ಚುನಾವಣೆ ನನಗೆ ಹೊಸತು, ಅನುಭವವೂ ಇರಲಿಲ್ಲ, ದುಡ್ಡೂ ಇರಲಿಲ್ಲ. ‘ “ ಸಾಂಕೇತಿಕವಾಗಿ ಸ್ಪರ್ಧಿಸಿ, ಸೋಲು-ಗೆಲುವು ಮುಖ್ಯ ಅಲ್ಲ’’ ಎಂದು ನನ್ನ ಮನ ಒಲಿಸಿ ಚುನಾವಣೆಗೆ ನಿಲ್ಲಿಸಿದರು. ದುಡ್ಡೇನೋ ಸ್ವಲ್ಪ ಕೊಟ್ಟರು, ಅದು ಕೆಲವು ದಿನಗಳಲ್ಲಿ ಖರ್ಚಾಯಿತು. ಅದರ ನಂತರ ಕೈಖಾಲಿ. ಆ ಚುನಾವಣೆಯಲ್ಲಿ ನಾನು ಹೀನಾಯವಾಗಿ ಸೋತು ಬಿಟ್ಟೆ ಎಂದು ಸಿದ್ದರಾಮಯ್ಯ ಸ್ಮರಿಸಿದರು.

ಅದರ ನಂತರ ಜನತಾ ಪಕ್ಷ ಒಡೆದುಹೋಯಿತು, ಜಾರ್ಜ್, ಚರಣ್ ಸಿಂಗ್ ಎಲ್ಲ ಸೇರಿ ಜನತಾ (ಸೆಕ್ಯುಲರ್) ಪಕ್ಷ ಕಟ್ಟಿದ್ದರು. 1983ರ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷದಿಂದ ಸ್ಪರ್ಧಿಸುವಂತೆ ಜಾರ್ಜ್ ಮತ್ತೆ ಕೇಳಿಕೊಂಡರು. ಆಗಲೂ ನಾನು ಮೊದಲು ಹಿಂಜರಿದು ಆ ಮೇಲೆ ಒಪ್ಪಿಕೊಂಡೆ. ಏನೋ ಸಮಸ್ಯೆಯಾಗಿ ಆ ಚುನಾವಣೆಗೆ ಅವರ ಪಕ್ಷದ ಬಿ ಫಾರ್ಮ್ ಸಿಗದೆ ನಾನು ಪಕ್ಷೇತರನಾಗಿ ಸ್ಪರ್ಧಿಸಬೇಕಾಯಿತು. ಆ ಚುನಾವಣೆಯ ಪ್ರಚಾರದಲ್ಲಿ ಜಾರ್ಜ್ ಅವರು ಕರ್ಪೂರಿ ಠಾಕೂರ್ ಜೊತೆ ಬಂದು ಪ್ರಚಾರ ಮಾಡಿದ್ದರು. ಚುನಾವಣಾ ಖರ್ಚಿಗೆ ಆ ಕಾಲದಲ್ಲಿ ಜಾರ್ಜ್ ನನಗೆ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದನ್ನು ಮರೆಯಲಾರೆ. ಆ ಚುನಾವಣೆಯಲ್ಲಿ ಗೆದ್ದ ನಂತರ ನನ್ನ ನಿಜವಾದ ರಾಜಕೀಯ ಪಯಣ ಶುರುವಾಗಿದ್ದು ಎಂದು ಹೇಳಿದರು.
ದಕ್ಷಿಣ ಭಾರತದಲ್ಲಿರುವ ರಾಜಕಾರಣಿಗಳಿಗೆ ದೆಹಲಿ ಭೌಗೋಳಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಬಲು ದೂರ. ಇದಕ್ಕೆ ಭಾಷೆ ಜೊತೆಗೆ ಅಲ್ಲಿನ ಭಿನ್ನ ಸಂಸ್ಕೃತಿ, ಆಹಾರ ಪದ್ದತಿ ಕೂಡಾ ಕಾರಣ. ನಾವೆಲ್ಲ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿದರೆ ಒಂದೆರಡು ದಿನಗಳ ವಾಸ್ತವ್ಯ ಮಾಡಿ ಮತ್ತೆ ಕರ್ನಾಟಕಕ್ಕೆ ಓಡಿಬರುತ್ತೇವೆ. ಹಿಂದಿ ಮತ್ತು ಇಂಗ್ಲೀಷ್ ಒಳಗೊಂಡಂತೆ ಹಲವಾರು ಭಾಷೆಗಳನ್ನು ಬಲ್ಲ ಜಾರ್ಜ್ ಫರ್ನಾಂಡಿಸ್ ಉತ್ತರಭಾರತೀಯನೇ ಆಗಿಬಿಟ್ಟಿದ್ದರು ಎಂದು ಹೇಳಿದರು.

ಅವರು ಭಾರತೀಯ ಜನತಾ ಪಕ್ಷದ ಜೊತೆ ಸೇರಿಕೊಂಡ ನಂತರ ನನಗೂ ಅವರಿಗೂ ರಾಜಕೀಯ ಭಿನ್ನಾಭಿಪ್ರಾಯಗಳಿತ್ತು. ಕೊನೆ ದಿನಗಳಲ್ಲಿ ಸೈದ್ಧಾಂತಿಕವಾಗಿ ನಾವಿಬ್ಬರೂ ಪರಸ್ಪರ ವಿರುದ್ಧ ಧ್ರುವಗಳಲ್ಲಿದ್ದವರು. ಇದರ ಹೊರತಾಗಿಯೂ ನಾವಿಬ್ಬರು ಆಪ್ತ ಸ್ನೇಹಿತರಾಗಿದ್ದೆವು. ಜಾರ್ಜ್ ಸ್ನೇಹಕ್ಕೆ ಬಹಳ ಬೆಲೆ ಕೊಡುವವರು. ಕರ್ನಾಟಕದಲ್ಲಿ ಅವರಿಗೆ ದೊಡ್ಡ ಸ್ನೇಹ ಬಳಗ ಇತ್ತು. ಜೆ.ಎಚ್.ಪಟೇಲ್ ಅವರು ಬಿಜೆಪಿಯನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದರೂ ಗೆಳೆಯ ಜಾರ್ಜ್ ಫರ್ನಾಂಡಿಸ್ ಅವರ ಮಾತಿನಂತೆ ಎನ್ ಡಿ ಎ ಸೇರಿದ್ದರು.
ಹುಟ್ಟೂರನ್ನು ಅವರು ಮರೆತಿರಲಿಲ್ಲ. ಈ ನೆನಪಿನಿಂದಾಗಿಯೇ ತಾನು ಕೇಂದ್ರ ರೈಲ್ವೆ ಸಚಿವರಾಗಿದ್ದ ಕಾಲದಲ್ಲಿ ಕರಾವಳಿ ಜನತೆಯ ಬಹುದಿನಗಳ ಕನಸಾದ ‘ಕೊಂಕಣ ರೈಲ್ವೇ ಯೋಜನೆ’ಯನ್ನು ಯಶಸ್ವಿಯಾಗಿ ಜಾರಿಗೊಳಿಸಿದರು. ಈ ಯೋಜನೆಯ ಉದ್ಘಾಟನೆಗೆ ಬಂದಿದ್ದ ಜಾರ್ಜ್ ಅವರ ಜೊತೆಯಲ್ಲಿ ನಾನು ಕಾರವಾರದಿಂದ ಮಂಗಳೂರು ವರೆಗೆ ರೈಲಿನಲ್ಲಿ ಪ್ರಯಾಣಿಸಿದ್ದೆ. ಆ ಹೊತ್ತಿನಲ್ಲಿ ಅವರು ತಮ್ಮ ರಾಜಕೀಯ ಜೀವನದ ಏರುಪೇರುಗಳ ಬಗ್ಗೆ ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದರು.
ಇಂದು ವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂಥಾ ಸಂದಿಗ್ಧ ಸಮಯದಲ್ಲಿ ಜಾರ್ಜ್ ಫರ್ನಾಂಡೀಸ್ ಅವರು ನಮ್ಮೊಂದಿಗೆ ಇರಬೇಕಿತ್ತು. ನನ್ನ ರಾಜಕೀಯ ಜೀವನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಾರ್ಜ್ ಫರ್ನಾಂಡೀಸ್ ಅವರ ಕುರಿತಾದ ಪುಸ್ತಕವನ್ನು ಅತ್ಯಂತ ಸಂತೋಷದಿಂದ ಲೋಕಾರ್ಪಣೆಗೊಳಿಸಿದ್ದೇನೆ. ಈ ಅವಕಾಶ ಮಾಡಿಕೊಟ್ಟದ್ದಕ್ಕಾಗಿ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರದ ಮಾಜಿ ಸಚಿವ, ದಿವಂಗತ ಜಾರ್ಜ್ ಫರ್ನಾಂಡೀಸ್ ಅವರ ಜೀವನ ಚರಿತ್ರೆ ಕುರಿತಾದ “ದಿ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡೀಸ್” ಪುಸ್ತಕವನ್ನು ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ನಿವೃತ್ತ ನ್ಯಾಯಮೂರ್ತಿಗಳಾದ ವೆಂಕಟಾಚಲ, ಸಂತೋಷ್ ಹೆಗಡೆ, ಲೇಖಕ ಡಾ. ರಾಹುಲ್ ರಾಮಗುಂಡಂ, ಮೈಕೇಲ್ ಫರ್ನಾಂಡೀಸ್, ಪತ್ರಕರ್ತ ಹನೀಫ್ ಮತ್ತಿತರರು ಭಾಗವಹಿಸಿದ್ದರು.
ನಿವೃತ್ತ ನ್ಯಾಯಮೂರ್ತಿಗಳಾದ ವೆಂಕಟಾಚಲ, ಸಂತೋಷ್ ಹೆಗಡೆ, ಲೇಖಕ ಡಾ. ರಾಹುಲ್ ರಾಮಗುಂಡಂ, ಮೈಕೇಲ್ ಫರ್ನಾಂಡೀಸ್, ಪತ್ರಕರ್ತ ಹನೀಫ್ ಮತ್ತಿತರರು ಭಾಗವಹಿಸಿದ್ದರು.

Join Whatsapp