ಬೆಂಗಳೂರು: ಬಿಟ್ ಕಾಯಿನ್ ಆರೋಪದ ತನಿಖೆ ನಡೆಸಿ ನಿಮ್ಮ ಮೇಲಿನ ಆರೋಪವನ್ನು ಸುಳ್ಳೆಂದು ಸಾಬೀತುಪಡಿಸಿ ಎಂದು ಹೇಳಬೇಕಾಗಿದ್ದ ಪ್ರಧಾನಿ ಮೋದಿ, ಆರೋಪವನ್ನೇ ನಿರ್ಲಕ್ಷಿಸಿ ಎಂದು ಹೇಳಿದರೆ ಹೇಗೆ? ಅಪರಾಧ ಪ್ರಕರಣಗಳ ತನಿಖೆಗೆ ಪೊಲೀಸ್ ಇಲಾಖೆ, ನ್ಯಾಯಾಲಯಗಳ ಅಗತ್ಯ ಇಲ್ಲವೇ? ಪ್ರಧಾನಮಂತ್ರಿಯವರ ಏಕಪಕ್ಷೀಯ ತೀರ್ಮಾನವೇ ಅಂತಿಮವೇ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಟ್ ಕಾಯಿನ್ ಹಗರಣದ ಬಗ್ಗೆ ಕೇಂದ್ರ/ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳಿಂದಲೇ ತನಿಖೆ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಈಗಿನ ಮುಖ್ಯಮಂತ್ರಿಗಳು ಮಾತ್ರ ಅಲ್ಲ ಹಿಂದಿನ ಗೃಹಮಂತ್ರಿಗಳು ಹೌದು. ಈ ಹಂತದಲ್ಲಿ ಪಿಎಂ ಮೋದಿ ಆರೋಪವನ್ನು ನಿರ್ಲಕ್ಷಿಸಿ ಎಂದರೆ ತನಿಖೆಯನ್ನು ಕೈಬಿಡಿ ಎಂದಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಬಿಟ್ ಕಾಯಿನ್ ಹಗರಣದಲ್ಲಿ ಬಿಎಂ ಬೊಮ್ಮಾಯಿ ಭಾಗಿಯೋ ಇಲ್ಲವೋ ನಮಗೆ ಗೊತ್ತಿಲ್ಲ, ಅವರು ಅಪರಾಧಿಗಳೆಂದು ಯಾರೂ ಹೇಳಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಿ ಎಂದಷ್ಟೇ ನಾನು ಮತ್ತು ನಮ್ಮ ಪಕ್ಷದ ನಾಯಕರು ಹೇಳುತ್ತಿರುವುದು. ತನಿಖೆ ನಡೆಸಲು ಹಿಂಜರಿಕೆ ಯಾಕೆ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ಕಾಂಗ್ರೆಸ್ ನಾಯಕರ ಹೆಸರು ಇದೆ ಎಂದು ಹೇಳಿ ನಮ್ಮ ಬಾಯಿಮುಚ್ಚಿಸಲು ಪ್ರಯತ್ನ ಮಾಡಬೇಡಿ. ಕೇಂದ್ರ ಮತ್ತು ರಾಜ್ಯಗಳಲ್ಲಿ ನಿಮ್ಮದೇ ಸರ್ಕಾರ ಇದೆ. ತನಿಖೆ ನಡೆಸಿ ಅಪರಾಧಿಗಳನ್ನು ಬಯಲಿಗೆಳೆಯಿರಿ, ಅವರೆಲ್ಲ ಯಾವ ಪಕ್ಷದವರು ಎನ್ನುವುದನ್ನು ಆ ಮೇಲೆ ನೋಡಿಕೊಳ್ಳೋಣ ಎಂದು ಸಿದ್ದರಾಮಯ್ಯ ಟ್ವೀಟ್ ನಲ್ಲಿ ಸವಾಲು ಹಾಕಿದ್ದಾರೆ.