Home ಟಾಪ್ ಸುದ್ದಿಗಳು ಟಿಪ್ಪು ಜಯಂತಿಗೆ ಶುಭಕೋರದ ಸಿದ್ದರಾಮಯ್ಯ: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ

ಟಿಪ್ಪು ಜಯಂತಿಗೆ ಶುಭಕೋರದ ಸಿದ್ದರಾಮಯ್ಯ: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿಗೆ ಶುಭಕೋರದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.


ಟಿಪ್ಪು ಜಯಂತಿ ಆಚರಣೆ ಆರಂಭವಾದ ವರ್ಷದಿಂದ ಹಿಡಿದು ಕಳೆದ ವರ್ಷದ ತನಕ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿಗೆ ಶುಭ ಕೋರಿದ್ದರು. ಆದರೆ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯನವರು ಟಿಪ್ಪು ಜಯಂತಿಗೆ ಶುಭ ಕೋರಿಲ್ಲ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಬಹುತೇಕ ಮುಸ್ಲಿಂ ಸಮುದಾಯದ ಜನರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್ ಅವರನ್ನು ಮರೆತುಬಿಟ್ಟಿದ್ದಾರೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಕೂಡ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಟಿಪ್ಪು ಜಯಂತಿ ಆಚರಿಸಿದಂತೆ ಸರಕಾರಕ್ಕೆ ಸಲಹೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.


ವಿರೋಧ ಪಕ್ಷದಲ್ಲಿರುವಾಗ ಸಿದ್ದರಾಮಯ್ಯನವರು ಟಿಪ್ಪು ಜಯಂತಿಗೆ ಶುಭ ಕೋರಿದ್ದರು. ಆದರೆ ಅಧಿಕಾರ ಬಂದ ಬಳಿಕ ಟಿಪ್ಪು ಜಯಂತಿಗೆ ಶುಭಕೋರಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ಟಿಪ್ಪು ಜಯಂತಿ ಕೈಬಿಟ್ಟಿದ್ದಕ್ಕೆ ವಿರೋಧ ಮಾಡಿದ್ದ ಸಿದ್ದರಾಮಯ್ಯನವರು ಈಗ ಅಧಿಕಾರದಲ್ಲಿದ್ದರೂ ಟಿಪ್ಪು ಜಯಂತಿ ಆಚರಿಸಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ. ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹೆದರಿ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಣೆ ಕೈಬಿಟ್ಟಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.


ಸಿದ್ದರಾಮಯ್ಯನವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಜನರು ಈ ಹಿಂದೆ ಟಿಪ್ಪು ಜಯಂತಿಗೆ ಶುಭಕೋರಿದ್ದ ಸಿದ್ದರಾಮಯ್ಯ ಅವರ ಪೋಸ್ಟ್ ಮತ್ತು ಪೋಸ್ಟರ್’ಗಳನ್ನು ಹರಿಯಬಿಟ್ಟಿದ್ದಾರೆ. ಕಳೆದ ವರ್ಷ ಟಿಪ್ಪು ಜಯಂತಿಗೆ ಶುಭಕೋರಿದ್ದ ಸಿದ್ದರಾಮಯ್ಯ, `ಅಪ್ರತಿಮ ದೇಶಪ್ರೇಮಿ, ವೀರ ಸ್ವಾತಂತ್ರ್ಯ ಹೋರಾಟಗಾರ, ದಕ್ಷ ಆಡಳಿತಗಾರ, ಪರಧರ್ಮ ಸಹಿಷ್ಣು ಟಿಪ್ಪು ಸುಲ್ತಾನ್ ಓರ್ವ ಆದರ್ಶಸ್ವರೂಪಿ ಜನನಾಯಕ’’ ಎಂದು ಬಣ್ಣಿಸಿದ್ದರು.ಬ್ರಿಟೀಷ್ ಸಾಮ್ರಾಜ್ಯವನ್ನು ಸಿಂಹಸ್ವಪ್ನದಂತೆ ಕಾಡಿದ ಟಿಪ್ಪು ಸುಲ್ತಾನರ ತ್ಯಾಗ, ಪರಾಕ್ರಮವನ್ನು ಹೆಮ್ಮೆಯಿಂದ ಸ್ಮರಿಸುತ್ತೇನೆ, ಟಿಪ್ಪು ಜಯಂತಿ ದಿನ ಅವರಿಗೆ ಗೌರವದ ನಮನಗಳು’ ಎಂದು ತನ್ನ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಶುಭಕೋರಿದ್ದರು.

Join Whatsapp
Exit mobile version