ಬೆಂಗಳೂರು: ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಪತನಗೊಳ್ಳುತ್ತದೆ. ಕಾಂಗ್ರೆಸ್ ಸರ್ಕಾರವನ್ನು ಪಕ್ಷದ ಶಾಸಕರೇ ಉರುಳಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಹೇಗೆ ಸರ್ಕಾರ ಉರುಳುತ್ತದೆ ಎಂದು ಕೇಳುವ ಕಾಂಗ್ರೆಸ್ ನಾಯಕರು ಹಿಂದೆ ನಡೆದಿದ್ದನ್ನು ನೆನಪಿಸಿಕೊಳ್ಳಲಿ. ಆಗ ಕಾಂಗ್ರೆಸ್ ಪಕ್ಷದ 15 ಶಾಸಕರು ಬಿಜೆಪಿ ಸೇರಿದಾಗ ಮತ್ತು ಸಮ್ಮಿಶ್ರ ಸರ್ಕಾರ ಉರುಳಿ ಬಿದ್ದಾಗ ಸಿದ್ದರಾಮಯ್ಯ ಮತ್ತು ಇತರ ನಾಯಕರಿಗೆ ಏನೂ ಮಾಡಲಾಗಲಿಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೇರೆಯವರು ಬೀಳಿಸುವ ಪ್ರಮೇಯ ಉದ್ಭವಿಸಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗದ ಕಾರಣ ಕಾಂಗ್ರೆಸ್ ಶಾಸಕರು ತಮ್ಮ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಮತ್ತು ಯಾಕಾದರೂ ನಮ್ಮ ಪಕ್ಷ ಅಧಿಕಾರಕ್ಕೆ ಬಂತೋ ಅಂತ ಪರಿತಪಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಉರುಳಲು ಅವರೇ ಕಾರಣರಾಗುತ್ತಾರೆ ಎಂದು ಹೇಳಿದರು.